ವಿಮರ್ಶೆ

ತಲೆ ಕೆಡಿಸುತ್ತಾಳೆ ಈ 'ಸ್ಮಗ್ಲರ್'
0 rating
1 month ago filmreview


ಸಾಮಾನ್ಯವಾಗಿ ಸ್ಮಗ್ಲರ್ ಗಳು ಪೊಲೀಸರ ತಲೆ ಕೆಡಿಸುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಪ್ರಿಯಾ ಹಾಸನ್  ಸ್ಮಗ್ಲರಾಗಿ ಬಂದಾಗ ಪ್ರೇಕ್ಷಕರು ತಲೆ ಕೆಡಿಸಿಕೊಂಡು‌ ನೋಡುವಂತಾಗಿರುವುದು ವಿಪರ್ಯಾಸ. ಚಿತ್ರದ ಘೋಷಣೆಯಾಗಿ ವರ್ಷಗಳೇ ಕಳೆದಿದ್ದರೂ ಪ್ರಿಯಾ ಹಾಸನ್ ಮತ್ತೆ ಮರಳಿ ಬರುತ್ತಿದ್ದಾರೆ ಎಂಬ ಕಾರಣಕ್ಕೆ 'ಸ್ಮಗ್ಲರ್' ಒಂದಷ್ಟು ನಿರೀಕ್ಷೆ ಉಳಿಸಿಕೊಂಡಿತ್ತು. ಆದರೆ ಚಿತ್ರ ಥಿಯೇಟರಲ್ಲಿ ನಿರಾಶೆ ಮೂಡಿಸಿದೆ ಎಂದೇ ಹೇಳಬೇಕು.

ಚಿತ್ರದಲ್ಲಿ ಪ್ರಿಯಾ ಸೈರಸ್ ಎನ್ನುವ ಸ್ಮಗ್ಲರ್ ಮಾತ್ರವಲ್ಲ ಭರತನಾಟ್ಯ ಕಲಾವಿದೆಯ ಪಾತ್ರವನ್ನು ಕೂಡ ನಿರ್ವಹಿಸಿದ್ದಾರೆ ಎನ್ನುವುದು ವಿಶೇಷ. ಭರತನಾಟ್ಯ ಕಲಾವಿದೆ ಹಳ್ಳಿ ಹುಡುಗಿಯಾಗಿ ಬಂದಾಗ   ಶಾಂತಿ ಪ್ರಿಯ ಪ್ರೇಕ್ಷಕರು ಖುಷಿ‌ಪಡುತ್ತಾರೆ. ಆದರೆ ಅಲ್ಲಿಗೂ ಸೈರಸ್ ಆಗಮನವಾಗುವುದರೊಂದಿಗೆ ಚಿತ್ರದ ತುಂಬ ಹೊಡಿ ಬಡಿಯೇ ತುಂಬಿಕೊಂಡಿದೆ. ತೂರಿ ಬರುವ ಗುಂಡನ್ನು ಎರಡು ಬೆರಳಲ್ಲಿ ತಡೆಯುವ ಶಕ್ತಿ ನಾಯಕಿಗಿದೆ ಎಂದ ಮೇಲೆ ಅಕೆಯ ಬಗ್ಗೆ ವಿಮರ್ಶಿಸುವ ಸಂಗತಿಗಳೇ ಇಲ್ಲ. ವಿದೇಶದಲ್ಲಿ ಕಾರ್ಯನಿರತಳಾದ ಈ ಸ್ಮಗ್ಲರ್ ಅಲ್ಲಿಂದ ಭಾರತಕ್ಕೆ ಬರುತ್ತಾಳೆ. ಹಾಗೆ ಬರಲು ಕಾರಣ ಐದು ಸಾವಿರ ಕೋಟಿ ಬೆಲೆಯ ಚಿನ್ನದ ವ್ಯವಹಾರ ಆಗಿರುತ್ತದೆ. ಚಿನ್ನವನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನ ಸೈರಸ್ ಳದ್ದು. ಇದರಲ್ಲಿ ಆಕೆ ಗೆಲ್ಲುತ್ತಾಳಾ ಸೋಲುತ್ತಾಳ ಎನ್ನುವುದನ್ನು ಚಿತ್ರದ ಕೊನೆಯ ದೃಶ್ಯದಲ್ಲಿ ತೋರಿಸಲಾಗಿದೆ. 

ಭಾರತಕ್ಕೆ ಬಂದೊಡನೆ ಸೈರಸ್  ಕೊಲೆಯಾದಳೆಂದು ತಿಳಿಯುವಂತೆ ಮಾಡುವ ಘಟನೆ ಯಾವುದು? ಗಾಯಾಳುವಾಗಿ ಆಸ್ಪತ್ರೆಗೆ ಸೇರುವಾಕೆ ಸೈರಸ್ಸೇನಾ? ಹಾಗಾದರೆ ಸಹೋದರಿ ಕಾತ್ಯಾಯಿನಿ ಏನಾದಳು? ಇಬ್ಬರೂ ಬದುಕಿರುತ್ತಾರ ಎಂಬ ಸತ್ಯವನ್ನು  ಚಿತ್ರದ ಕ್ಲೈಮ್ಯಾಕ್ಸ್ ಹೇಳುತ್ತದೆ.

ನಿರ್ಮಾಪಕಿ, ನಿರ್ದೇಶಕಿಯಾಗಿ ಮಾತ್ರವಲ್ಲ, ನಟಿಯಾಗಿ ಚಿತ್ರದ ತುಂಬಾ ಪ್ರಿಯಾ ಹಾಸನ್ ತುಂಬಿಕೊಂಡಿದ್ದಾರೆ. ಆಲ್ಬಮ್ ಹಾಡುಗಳಂತೆ ಪರದೆಯ ತುಂಬ ಅವರನ್ನೇ ಕಾಪಿ ಪೇಸ್ಟ್ ಮಾಡಲಾಗಿದೆ! ಹೊಡೆದಾಟದಲ್ಲಿ ಸಾಹಸಿಕತೆ ಇದೆಯಾದರೂ, ಅಮಾನುಷಿಕತೆಯೇ ತುಂಬಿದೆ. ರಿವಾಲ್ವರ್ ನಿಂದ ಹೊರಟ ಗುಂಡನ್ನು ಎರಡೇ ಬೆರಳುಗಳಿಂದ ಹಿಡಿದಿಡುವ ದೃಶ್ಯ ಅದಕ್ಕೊಂದು ಉದಾಹರಣೆ.

ಅದೇ ರೀತಿ ಸೆಂಟಿಮೆಂಟ್ ದೃಶ್ಯಗಳಲ್ಲಿ ನಾಟಕೀಯತೆ  ಎದ್ದು ಕಾಣುತ್ತದೆ. ಸೈರಸ್ ಸಹೋದರಿ ಕಾತ್ಯಾಯಿನಿಯ ಪಾತ್ರಕ್ಕೆ ಒಬ್ಬ ಪ್ರಿಯಕರನಿದ್ದಾನೆ. ಆದರೆ ಆತ ಚಿತ್ರದ ನಾಯಕ ಎನ್ನಲಾಗದು. ಚಿತ್ರಕ್ಕೆ ಪ್ರಿಯಾ ಹಾಸನ್ ನಾಯಕಿ ಮತ್ತು ನಾಯಕ ಎರಡೂ ಆಗಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಸುಮನ್, ಸಯ್ಯಾಜಿ ಶಿಂಧೆ, ರವಿಕಾಳೆ, ರಮೇಶ್ ಭಟ್, ಗಿರಿಜಾ ಲೋಕೇಶ್, ಮಿತ್ರ, ಉಮೇಶ್ ಮೊದಲಾದವರು ನಟಿಸಿದ್ದಾರೆ. ಪ್ರಿಯಾ ಹಾಸನ್ ಅಭಿಮಾನಿಗಳು ಮಾತ್ರ ಮೆಚ್ಚಬಹುದಾದ ಚಿತ್ರ ಇದು. 

ಚಿತ್ರ: ಸ್ಮಗ್ಲರ್

ತಾರಾಗಣ: ಪ್ರಿಯಾ ಹಾಸನ್, ಸುಮನ್..

ನಿರ್ದೇಶನ: ಕೆ ವೀರು, ಪ್ರಿಯಾ ಹಾಸನ್

ನಿರ್ಮಾಣ: ಗೌರಮ್ಮ, ಪ್ರಿಯಾ ಹಾಸನ್

ನಿಮ್ಮ ಅಭಿಪ್ರಾಯಗಳುRelated Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್