ವಿಮರ್ಶೆ


ಮತ್ತೆ ಮತ್ತೆ ಇಷ್ಟವಾಗುವ ' ಮುಗುಳುನಗೆ'
0 rating
4 months ago filmreview


ಮಗು ಹುಟ್ಟಿದಾಗ ಅಳುವುದು ಸಾಮಾನ್ಯ. ಆದರೆ ಇಲ್ಲಿ ಹಾಗಲ್ಲ. ಮಗು ಹುಟ್ಟಿದ ತಕ್ಷಣ ನಗುತ್ತೆ. ಅತ್ತ ನಗು ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರೂ ಭಾವಿಸಿದರೆ ಈ ಮಗುವಿನ ಹೆತ್ತವರಿಗೆ ಮಾತ್ರ ' ನಗು ' ಒಂದು ಕಾಯಿಲೆಯಂತೆ ಕಾಣುತ್ತದೆ. ಈ ರೀತಿಯ ವಿಚಿತ್ರ ಕಥಾವಸ್ತುವನ್ನ ಹೊಂದಿ ವಿಶೇಷವಾಗಿ ಗುರುತಿಸಲ್ಪಟ್ಟ ಸಿನೆಮಾವೇ ' ಮುಗುಳುನಗೆ'.

 ಈ ಚಿತ್ರದ ಮೂಲಕ ನಟ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಕೆಮೆಸ್ಟ್ರಿ ಮತ್ತೆ ಸಿನಿರಸಿಕರ ಮನ ಗೆದ್ದಿದೆ. ಈ ಚಿತ್ರದಲ್ಲಿ ಗಣೇಶ್ 

' ಪುಲಿಕೇಶಿ' ಎಂಬ ಯುವಕನ ಪಾತ್ರದಲ್ಲಿ ನಟಿಸಿದ್ದಾರೆ. ನಗುತ್ತಲೇ ಹುಟ್ಟಿದ ಮಗ ಪುಲಿಕೇಶಿಗೆ 

' ನಗುವ ಕಾಯಿಲೆ' ಇದೆ ಎಂಬ ಆತಂಕ ಹೆತ್ತವರದ್ದು. ತಂದೆಯಾಗಿ ಅಚ್ಯುತ್ ಹಾಗೂ ತಾಯಿಯಾಗಿ ನಿಹಾರಿಕಾ ನಟಿಸಿದ್ದಾರೆ. ತಮ್ಮ ಮಗನಿಗೆ ನಗುವ ಕಾಯಿಲೆ ಇದೆ ಎಂದು ಭಾವಿಸಿದ ಹೆತ್ತವರು ವೈದ್ಯರಿಗೆ ತೋರಿಸುತ್ತಾರೆ. ಅವರಿಗೂ ಇದು ಗೊಂದಲ ಮೂಡಿಸುತ್ತದೆ. ಕೊನೆಗೆ ವೈದ್ಯರೇ ' ಈತ ಹುಟ್ಟಿರುವುದೇ ನಿಮ್ಮ ಭಾಗ್ಯ' ಎಂದು ಹೇಳಿ ಸಮಾಧಾನ ಪಡಿಸುತ್ತಾರೆ. ಇದು ಕಥೆಯ ಆರಂಭದ ಭಾಗ. ಹೀಗೆ ಸಾಗುವ ಕಥೆಯಲ್ಲಿ ತಿರುವುಗಳು ಬರುತ್ತವೆ. ಹೀಗೆ ಒಂದು ದಿನ ನಾಯಕ ಪುಲಿಕೇಶಿ, ಕಾಲೇಜಿನಲ್ಲಿ ನಾಟಕ ನೋಡಲು ಹೋಗುತ್ತಾನೆ. ಈ ವೇಳೆ ಈತನ ನಗುವಿಗೆ ಮನಸೋತ ಹುಡುಗಿಯೇ ಆಶಿಕಾ ರಂಗನಾಥ್. ಇದಾದ ಕೆಲ ದಿನಗಳ ನಂತರ ನಿಖಿತಾ ನಾರಾಯಣ್ ಳನ್ನ ಕನವರಿಸುತ್ತಾನೆ. ಈಕೆ ಚೆನ್ನಾಗಿ ಗಿಟಾರ್ ನುಡಿಸುತ್ತಾಳೆ. ಆದರೆ ಮತ್ತೆ ಇವರಿಬ್ಬರ ಸಂಬಂಧ ದೂರವಾಗುತ್ತದೆ. ನಂತರ ಅಪೂರ್ವ ಅರೋರಳ ಪರಿಚಯ. ಇವಳನ್ನ ಹುಡುಕುತ್ತಾ ನಟ ಕುಂದಾಪುರಕ್ಕೆ ಹೋಗುತ್ತಾನೆ. ಇವಳನ್ನೇ ನಾನು ಮದುವೆಯಾಗುತ್ತೇನೆ ಎನ್ನುವಾಗ ವಿಚಿತ್ರ ತಿರುವು. ತದನಂತರ ಆಘಾತ ನಾಯಕನಿಗೆ ಎದುರಾಗುತ್ತದೆ. ಇಷ್ಟೆಲ್ಲಾ ಆದರೂ ನಾಯಕ ನಟ ಪುಲಿಕೇಶಿ ಅಳುವುದೇ ಇಲ್ಲ. ತನ್ನ ಪ್ರೀತಿಗೆ ಕೊಡಲಿಯೇಟು ಬಿದ್ದಾಗ ಗಣೇಶ್ ಅದನ್ನ ನಗುವಿನಿಂದಲೇ ಸ್ವಾಗತಿಸಿ, ನಗುವಿನ ಮೂಲಕವೇ ವಿದಾಯ ಕೋರುತ್ತಾನೆ. ಇದುವೇ ಈ ಚಿತ್ರದ ಸ್ಪೆಷಲ್. ಕೊನೆಗೆ ಈ ಚಿತ್ರದಲ್ಲಿ ನಾಯಕ ಪುಲಿಕೇಶಿ ಮದುವೆಯಾಗುತ್ತಾನ..? ಎಂಬುದೇ ಕುತೂಹಲ ಮೂಡಿಸುತ್ತದೆ. 

 ಈ ಮೂಲಕ ನಿರ್ದೇಶಕ ಯೋಗರಾಜ್ ಭಟ್, ಪ್ರೀತಿ ಸಿಗದಿದ್ದಾಗ ಅಥವಾ ಪ್ರೀತಿ ಮಾಡಿ ಕೊನೆಗೆ ಕೈ ಕೊಡುವ ಹುಡುಗಿಗೆ ' ಥ್ಯಾಂಕ್ಸ್' ಹೇಳಿ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಜೊತೆಗೆ ಇತರರಿಗಾಗಿ ನಗಬೇಡಿ. ನಾವು, ನಮಗಾಗಿ ನಗಬೇಕು, ಬದುಕಬೇಕು ಎನ್ನುವುದನ್ನ ಸಹ ' ಮುಗುಳುನಗೆ' ಯ ಮೂಲಕ ಹೇಳುತ್ತಾರೆ. ಈ ಮೂಲಕ ಈ ಸಿನಿಮಾ ನೋಡುಗರ ಭಾವನೆಯನ್ನ ಬಡಿದೆಬ್ಬಿಸುತ್ತದೆ. ಕಣ್ಣೀರು ಹಾಕಿಸುತ್ತದೆ. ಭಾವನೆಯ ತೀವ್ರತೆಯನ್ನು ಅರ್ಥ ಮಾಡಿಸುತ್ತದೆ. ಜೊತೆಗೆ ನಗುವಿನ ಮಹತ್ವವನ್ನ ತಿಳಿಸುತ್ತದೆ. 

ಇನ್ನೂ ಇದೆ ಸ್ಪೆಷಲ್..! 

 ' ಮುಗುಳುನಗೆ' ಯಲ್ಲಿ ಚಿತ್ರೀಕರಿಸಿರುವ ತಾಣಗಳು ಸುಂದರವಾಗಿದೆ. ನೋಡಲು ಖುಷಿ ಎನ್ನಿಸುತ್ತದೆ. ಹಾಡುಗಳು ಅಷ್ಟೇ, ಇಂಪಾಗಿದೆ. ಮೂರು ಪ್ರೇಮ ಕಥೆಯಲ್ಲಿ ಬರುವ ಮೂರು ಹುಡುಗಿಯರು ಸಹ ಖುಷಿ ನೀಡುತ್ತಾರೆ. ನದಿಯ ನೋಟ, ಗಿಟಾರ್ 

ನಾದ , ಸಮುದ್ರದ ನೋಟ ಮತ್ತೆ ಮತ್ತೆ ನೋಡುವಂತದ್ದು. ನಗುವಿನ ಮೂಲಕ ದುಃಖವನ್ನ ಸ್ವೀಕರಿಸುವ ಪರಿಯೇ ಸವಾಲೆನಿಸುತ್ತದೆ‌. ಚಿತ್ರದ ಮೊದಲ ಭಾಗ ವೇಗವಾಗಿ ಸಾಗುತ್ತದೆ. ದ್ವಿತೀಯ ಭಾಗದಲ್ಲಿ ಸ್ಪಲ್ಪ ವಿರಾಮವನ್ನ ತೆಗೆದು ಕೊಳ್ಳಲಾಗಿದೆ. ನಟ ಗಣೇಶ್ ಅಭಿನಯ ಮತ್ತಷ್ಟು ಪ್ರಬುದ್ದವಾಗಿದೆ. ನ್ಯಾಚುರಲ್ ಎದ್ದು ಕಾಣುತ್ತದೆ.

ನಾಯಕನ ತಂದೆಯಾಗಿ ಅಚ್ಯುತ್‌ ಕುಮಾರ್‌, ನಾಯಕಿ ತಂದೆಯಾಗಿ ರಂಗಾಯಣ ರಘು ಇಬ್ಬರ ನಟನೆ ಸೂಪರ್. ಇನ್ನು ನಾಯಕ ಗೆಳೆಯನಾಗಿ ತೊದಲು ಮಾತಿನ ಧರ್ಮಣ್ಣ ಇಷ್ಟವಾಗುತ್ತಾರೆ. ಆಶಿಕಾರ ಮುಗ್ದತನ, ನಿಖಿತಾರ ಬೋಲ್ಡ್‌ನೆಸ್‌, ಅಪೂರ್ವರ ಒರಟುತನ ಇಷ್ಟವಾಗುತ್ತದೆ.

ಸಣ್ಣ ಪಾತ್ರದಲ್ಲಿ ನಿರ್ಮಾಪಕ ಸಯ್ಯದ್‌ ಸಲಾಂ ಚೊಕ್ಕವಾಗಿ ನಟಿಸಿದ್ದಾರೆ. ಸುಜ್ಞಾನ್‌

ರ ಛಾಯಾಗ್ರಹಣ ಸಖತ್ತಾಗಿದೆ. ಹರಿಕೃಷ್ಣರ ಸಂಗೀತ ಇಂಪಾಗಿದೆ. ಹತ್ತು ವರ್ಷಗಳ ಬಳಿಕ ಒಂದಾದ ಭಟ್ರ ಹಾಗೂ ಗಣೇಶ್ ಜೋಡಿ ಒಳ್ಳೆಯ ಸಿನಿಮಾ ನೀಡಿದ್ದಾರೆ.


ನಿಮ್ಮ ಅಭಿಪ್ರಾಯಗಳುRelated Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್