ಉದಯೋನ್ಮುಖರು

ಕರಾವಳಿ ಕುವರನ ಬಣ್ಣದ ಪಯಣ
0

ಕಿರುತೆರೆ, ಹಿರಿತೆರೆ, ಮಾಡೆಲಿಂಗ್.. ಬಣ್ಣದ ಲೋಕದ ವಿವಿಧ ಆಯಾಮಗಳಲ್ಲಿ ಇಂದು ಕರಾವಳಿಯ ಹಲವರು ಗುರುತಿಸಿಕೊಂಡಿದ್ದಾರೆ. ಆ ಸಾಲಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಈ ಪ್ರತಿಭೆಯ ಹೆಸರು ಪ್ರಸನ್ನ ಶೆಟ್ಟಿ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ತುಳಸೀದಳ ಧಾರಾವಾಹಿಯಲ್ಲಿ ರಾಖಾ ಎಂಬ ಖಳನಾಯಕನ ಪಾತ್ರದಲ್ಲಿ ನಟಿಸಿದ್ದ ಪ್ರಸನ್ನ ರಿಗೆ ಬಾಲ್ಯದಿಂದಲೂ ನಟನೆಯತ್ತ ವಿಶೇಷ ಆಸಕ್ತಿ. 

ಶಾಲಾ ದಿನಗಳಲ್ಲಿ ನಾಟಕ, ಛದ್ಮವೇಷ ಗಳಲ್ಲಿ ಭಾಗವಹಿಸುತ್ತಿದ್ದ ಪ್ರಸನ್ನ ಅವರು ವಿದ್ಯಾಭ್ಯಾಸ ಮುಗಿಸಿ ನಟನಾ ಕ್ಷೇತ್ರದಲ್ಲಿ ಏನಾದರೂ ಸಾಧಿಸುವ ಬಯಕೆಯಿತ್ತು. ಮುಂದೆ ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಸಂಚಾರಿ ಥಿಯೇಟರ್ ನ ಬಗ್ಗೆ ತಿಳಿಯಿತು. ಮುಂದೆ ಅಲ್ಲಿ ಸೇರಿದ ಪ್ರಸನ್ನರಿಗೆ ಸಂಚಾರಿ ಥಿಯೇಟರಿನ ಮುಖ್ಯಸ್ಥೆ ಮಂಗಳಾ ಅವರು ತರಬೇತಿ ನೀಡಿದ್ದರು. ಮುಂದೆ ಸಂಚಾರಿ ಥಿಯೇಟರ್ ತಂಡದ ಮೂಲಕ ಹಲವು ನಾಟಕಗಳಲ್ಲಿ ಅಭಿನಯಿಸಿದ್ದ ಮುದ್ದು ಮುಖದ ಹುಡುಗ ಅಳಗುಳಿಮನೆ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು. 

ಚರಣದಾಸಿ ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿರುವ ಅವರು ಮುಂದೆ ಮೇಘ ಮಯೂರಿ ಧಾರಾವಾಹಿಯಲ್ಲಿ ಮೊದಲ ಬಾರಿ ಖಳನಾಯಕನಾಗಿ ಕಾಣಿಸಿಕೊಂಡಿದ್ದರು. ಮುಂದೆ ಅವನು ಮತ್ತು ಶ್ರಾವಣಿ, ಕನಕದಾಸರು, ಮದುಮಗಳು ಧಾರಾವಾಹಿಯಲ್ಲಿ ಅಭಿನಯಿಸಿದ್ದ  ಪ್ರಸನ್ನ ಶೆಟ್ಟಿ ಝೀ ಕನ್ನಡ ವಾಹಿನಿಯಲಳಿ ಪ್ರಸಾರವಾಗುತ್ತಿದ್ದ ಜನುಮದ ಜೋಡಿ ಯಲ್ಲಿ ಲೀಡ್ ಸಪೋರ್ಟಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ನಾಗಿಣಿ, ಶಾಂತಂ ಪಾಪಂ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಕರಾವಳಿ ಕುವರ ನಿಗೆ ಹೆಸರು ತಂದು ಕೊಟ್ಟದ್ದು ನಾಗಿಣಿಯ ಹರ್ಷ ಪಾತ್ರ. ಜನ ಇಂದಿಗೂ ಅವರನ್ನು ಹರ್ಷ ಪಾತ್ರದಿಂದಲೇ ಗುರುತಿಸುತ್ತಾರೆ. 

"ನಟನೆಯಲ್ಲಿ ನಾವು ಇನ್ನೊಂದು ಬದುಕನ್ನು ಬದುಕುತ್ತೇವೆ. ಈ ಬದುಕು ಬದುಕಲು ಎಲ್ಲರಿಗೂ ಸಾಧ್ಯವಿಲ್ಲ. ಕೇವಲ ನಟರಿಗೆ ಮಾತ್ರ ಸಾಧ್ಯ. ಆ ಕಾರಣಕ್ಕೆ ಕಲಾವಿದರು ನಿಜಕ್ಕೂ ಲಕ್ಕಿ" ಎನ್ನುವ ಚಾಕಲೇಟ್ ಹುಡುಗ ಪ್ರಸನ್ನ ಅವರು ನಟನಾ ಲೋಕಕ್ಕೆ ಬಂದ ನಂತರ ಸಾಕಷ್ಟು ತಾಳ್ಮೆ ಕಲಿತಿದ್ದಾರೆ. " ಬಣ್ಣದ ಲೋಕ ನನಗೆ ಜೀವನವನ್ನು ಕಲಿಸಿದೆ. ಕಾನ್ಫಿಡೆನ್ಸ್ ಇದ್ದರೆ ಮಾತ್ರ ಇಲ್ಲಿ ಮಿಂಚಲು ಸಾಧ್ಯ. ಪಾತ್ರ ಯಾವುದೇ ಆಗಿರಲಿ, ಮಾಡಿಯೇ ಮಾಡುತ್ತೇನೆ ಎಂಬ ಛಲ ಇದ್ದರೆ ಗೆಲುವು ಸಾಧ್ಯ" ಎನ್ನುವ ಪ್ರಸನ್ನ ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲೂ ನಟಿಸುವ ಮೂಲಕ ಚಿತ್ರ ಪ್ರೇಮಿಗಳಿಗೂ ಹತ್ತಿರವಾಗಿದ್ದಾರೆ. ಹರಿವು, ಸಿಪಾಯಿ, ಶುದ್ದಿ, ಸಿನಿಮಾ ಮೈ ಡಾರ್ಲಿಂಗ್, ಕಿರಗೂರಿನ ಗಯ್ಯಾಳಿಗಳು, ಪಾತುಮ್ಮ , ಅಲ್ಲಮ ಮತ್ತು ಬಿಬಿ5 ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 

"ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಬಯಕೆ ನನಗೆ" ಎನ್ನುವ ಪ್ರಸನ್ನ " ಪಾತುಮ್ಮ ಚಿತ್ರದಲ್ಲಿ ಹಿರಿಯ ಕಲಾವಿದೆ ಮತ್ತು ಗಾಯಕಿ ಬಿ.ಜಯಶ್ರೀ ಮತ್ತು ಅಚ್ಯುತ್ ಅವರ ಜೊತೆ ನಟಿಸಲು ಸಿಕ್ಕಿದೆ. ಅದು ನನ್ನ ಪಾಲಿನ ಅದೃಷ್ಟ. ಮಾತ್ರವಲ್ಲ ಜೊತೆಗೆ ಮದುಮಗಳು ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ" ಎನ್ನುವ ಪ್ರಸನ್ನ ರಿಗೆ ಡಾ.ರಾಜ್ ಕುಮಾರ್ ಮತ್ತು ನಟ ಸಂಚಾರಿ ವಿಜಯ್ ಅವರು ಸ್ಫೂರ್ತಿ. ನಿರ್ದೇಶಕ ದರ್ಶಿತ್ ಬಳವಳ್ಳಿ ಮತ್ತು ಕುಟುಂಬದವರೇ ನನಗೆ ಬೆನ್ನೆಲುಬು ಎನ್ನುವ ಕರಾವಳಿ ಕುವರ ನಿಜ ಜೀವನದಲ್ಲಿ ತುಂಬಾ ಜಾಲಿ ಪರ್ಸನ್. ಕುಟುಂದವರ ಜೊತೆಗೆ ಮತ್ತು ಸ್ನೇಹಿತರ ಜೊತೆಗೆ ನಗುನಗುತ್ತಾ ಕಾಲ ಕಳೆಯುತ್ತೇನೆ ಎನ್ನುವ ಪ್ರಸನ್ನ " ನಟನಾಗುವ ಮೊದಲು ರಂಗಭೂಮಿಯಲ್ಲಿ ತರಬೇತಿ ಪಡೆದರೆ ಒಳ್ಳೆಯದು" ಎನ್ನುತ್ತಾರೆ. 


- ಅನಿತಾ ಬನಾರಿ 


3 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್