ಉದಯೋನ್ಮುಖರು

ಅಪೂರ್ವ ಕಲಾ ನಿಧಿ ರವಿ ಸಾಲಿಯಾನ್
0

ಕುಂಚದಿಂದ ನಿರ್ಜೀವ ವಸ್ತುಗಳಿಗೆ ಜೀವ ನೀಡುವ ಈತ ಅದ್ಭುತ ಕಲಾವಿದ. ಅಣ್ಣ ಬರೆಯುತ್ತಿದ್ದ ಚಿತ್ರಗಳನ್ನು ನೋಡುತ್ತಾ ಬೆಳೆದ ಈ ಹುಡುಗ ಇದೀಗ ಪೆನ್ಸಿಲ್ ಹಿಡಿದನೆಂದರೆ ಸಾಕು, ಅಲ್ಲೊಂದು ಅಪೂರ್ವ ಕಲಾಕೃತಿ ತಯಾರಾಗುತ್ತದೆ. 

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ಪೆರ್ಣೆ ಬಿರಪಾದೆಯ ಈ ಹುಡುಗನ ಹೆಸರು ರವಿ ಸಾಲಿಯಾನ್. ಶಾಲಾ ಕಾಲೇಜು ದಿನಗಳಿಂದಲೂ ಚಿತ್ರಗಳನ್ನು ಬಿಡಿಸುತ್ತಿದ್ದ ಅವರು ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಪೈಂಟ್, ಪೆನ್ಸಿಲ್, ಸ್ಕೆಚ್ ಪೆನ್ ನಿಂದ ಕಲಾಕೃತಿಗಳನ್ನು ಬಿಡಿಸಲು ನನಗಿಷ್ಟ ಎನ್ನುವ ರವಿ ಸಾಲಿಯಾನ್ ಅವರ ಬಣ್ಣದ ಬದುಕಿಗೆ ಮುನ್ನುಡಿ ಬರೆದದ್ದು ಮಹಾನಗರಿ ಬೆಂಗಳೂರು ಎಂದರೆ ನಂಬಲೇ ಬೇಕು. ಐಟಿಐ ಮಾಡಿದ ರವಿ ಸಾಲಿಯಾನ್ ಉದ್ಯೋಗದ ನಿಮಿತ್ತ ಬೆಂಗಳೂರು ಸೇರಿದರು. ಮುಂದೆ ಬಿಡದಿಯ ಟೊಯಟಾ ಕಂಪೆನಿಯಲ್ಲಿ ಕೆಲಸ ಮಾಡುತ್ತಾ ಜೊತೆಗೆ ಡಿಪ್ಲೋಮಾ ಪದವಿ ಪಡೆದರು. ಮಹಾನಗರಿಯಲ್ಲಿ ಅವರಿಗೆ ದೊರೆತ ಪ್ರೋತ್ಸಾಹ ಅವರೊಳಗಿನ ಕಲಾವಿದನನ್ನು ಅನಾವರಣಗೊಳಿಸಿದ್ದು ಮಾತ್ರವಲ್ಲದೇ ಚಿತ್ರಕಲೆಯ ಹುಚ್ಚನ್ನು ಇಮ್ಮಡಿಗೊಳಿಸಿತು. ಅವರ ಕಲಾ ಪ್ರೇಮವನ್ನು ಕಂಡ ಕಲಾ ಸಾಂಗತ್ಯದ ದಿನೇಶ್ ಅವರು ಶಾಲಾ ಪ್ರಾಜೆಕ್ಟ್ ಗಳಿಗೆ ಚಿತ್ರ ಬಿಡಿಸುವ ಕೆಲಸ ನೀಡಿದರು. 

‘ನಾನು ಪೋರ್ಟ್ರೈಟ್ ಗಳನ್ನೇ ಬಿಡಿಸುವುದು ಹೆಚ್ಚು. ಫೇಸ್ ಬುಕ್ ನಲ್ಲಿ ನಾನು ಬಿಡಿಸಿದ ಚಿತ್ರಗಳನ್ನು ಕಂಡು ತುಂಬಾ ಜನ ತಮಗೊಂದು ಚಿತ್ರಗಳನ್ನು ಬರೆದು ಕೊಡಿ ಎಂದು ಕೇಳುತ್ತಾರೆ. ಬರ್ತ್ ಡೇ, ಆ್ಯನಿವರ್ಸರಿ ಸೇರಿದಂತೆ ಅನೇಕ ಶುಭಸಮಾರಂಭಗಳಿಗೆ ಅವುಗಳನ್ನು ಉಡುಗೊರೆಯಾಗಿ ನೀಡುತ್ತಾರೆ’’ ಎಂದು ಸಂತಸದಿಂದ ಹೇಳುವ ರವಿ ಅವರಿಗೆ ಜಲವರ್ಣ, ತೈಲವರ್ಣಗಳಲ್ಲಿಯೂ ಚಿತ್ರ ಬಿಡಿಸುವುದು ಗೊತ್ತಿದ್ದರೂ ಪೆನ್ಸಿಲ್ ನಿಂದ ಬರೆದಂತಹ ಚಿತ್ರಗಳೇ ಹೆಚ್ಚು ಖುಷಿ ನೀಡುವುದಂತೆ. 

ಪೆನ್ಸಿಲ್ ಕೈಯಲ್ಲಿ ಈಗಾಗಲೇ ಸಾಕಷ್ಟು ಪಳಗಿ, ನೈಜವೆನಿಸವಷ್ಟು ಸುಂದರ ಚಿತ್ರ ಬರೆಯುವ ರವಿ ಸಾಲಿಯಾನ್ ಅವರಿಗೆ ಬ್ರೆಜಿಲ್ ನ ಫಾಬಿಯೊ ರಾಂಗೆಲ್ ಅವರು ಮಾರ್ಗದರ್ಶಕರು. ಈಗಾಗಲೇ ಪೆನ್ಸಿಲ್ ಕಲೆಯಲ್ಲಿ ಪ್ರಸಿದ್ದಿ ಪಡೆದಿರುವ ಫಾಬಿಯೊ ರಾಂಗೆಲ್ ಚಿತ್ರಕಲೆಯ ಕುರಿತು ಸಲಹೆಗಳನ್ನು ನೀಡುತ್ತಾರೆ. ಅವರಿಗೆ ಇಂಗ್ಲೀಷ್ ಬಾರದಿರುವ ಕಾರಣ ರವಿ ಅವರು ಗೂಗಲ್ ಟ್ರಾನ್ಸ್ ಲೇಟ್ ನಲ್ಲಿ ಪೋರ್ಚುಗೀಸ್ ಭಾಷೆಯಲ್ಲಿ ಸಂದೇಶ ಕಳಿಸುತ್ತಾರೆ. ಅದಕ್ಕೆ ಅವರು ಪೋರ್ಚುಗೀಸ್ ಭಾಷೆಯಲ್ಲಿ ಕಳುಹಿಸುವ ಉತ್ತರವನ್ನು ಇಂಗ್ಲೀಷ್ ಭಾಷೆಗೆ ಬದಲಾಯಿಸಿ ಓದುತ್ತಾರೆ. ಹೀಗೆಯೇ ಅವರಿಂದ ಅನೇಕ ವಿಷಯಗಳನ್ನು ಕಲಿತೆ ಎನ್ನುತ್ತಾರೆ. ಅಲ್ಲದೇ ರಷ್ಯಾದ ವ್ಲಾಡಿಮಿರ್ ವೋಲ್ಲೇವ್ ಅವರನ್ನು ಆರಾಧಿಸುವುದು ಮಾತ್ರವಲ್ಲದೇ ಕೆಲವು ವಿಚಾರಗಳಲ್ಲ ಅವರನ್ನು ಅನುಕರಿಸುತ್ತೇನೆ ಎನ್ನುವ ಸಾಲಿಯಾನ್ ಅವರಿಗೆ ನಟನೆಯೂ ಇಷ್ಟವಂತೆ. 

ನಾಗರಾಜ್ ಕೋಟೆ ಅವರ ಬಣ್ಣ ಇನ್ಸ್ಟಿಟ್ಯೂಟ್ ಸೇರಿದ ಅವರು ಜೋಗಿಯ ರಾಣಿ ನಾಟಕಕ್ಕೆ ಬಣ್ಣ ಹಚ್ಚಿ ಮೆಚ್ಚುಗೆಯನ್ನು ಪಡೆದಿದ್ದಾರೆ. ಮುಂದೆ ಕಿರುಚಿತ್ರ, ಧಾರಾವಾಹಿಗಳಿಂದ ಅವಕಾಶಗಳು ಬಂದವು. ರಾಜೇಶ್ ಧ್ರುವ ನಿರ್ದೇಶನದ ಆಮಂತ್ರಣ ಎಂಬ ಕಿರುಚಿತ್ರದಲ್ಲಿ ನಟಿಸಿದ್ದ ಕರಾವಳಿಯ ಹುಡುಗ  ಇದೀಗ ಅವರ ನಿರ್ದೇಶನದ ತದ ನಂತರ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಅಲ್ಲದೇ ಅಜಯ್ ಟಿ.ಪಿ ನಿರ್ದೇಶನದ ಚಿಯರ್ಸ್ ಕಿರುಚಿತ್ರದಲ್ಲಿ ಅಭಿನಯಿಸಿದ್ದ ರವಿ ಗಾಂಧರ್ವ ಗೌಡ ನಿರ್ದೇಶನದ ಗರ್ನಲ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ರಿಲೀಸ್ ಆಗಲಿರುವ ನರೇಶ್ ಕಿಮಾರ್ ನಿರ್ದೇಶನದ ರಾಜು ಕನ್ನಡ ಮೀಡಿಯಂ ನಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಮುಖ್ಯವಾದ ಸಂಗತಿ ಎಂದರೆ ಈಗಾಗಲೇ ಚಿತ್ರಕಲೆಯಲ್ಲಿ ಪಳಗಿರುವ ರವಿ ಸಾಲಿಯಾನ್ ಅವರು ಅದ್ಭುತ ಮೆಹಂದಿ ಕಲಾವಿದರು ಹೌದು. ಊರಿನಲ್ಲಿ ಹೆಚ್ಚಿನ ಮದುವೆ, ಇನ್ನಿತರ ಕಾರ್ಯಕ್ರಮಗಳಿಗೆ ಇವರು ಮತ್ತು ಇವರ ಅಣ್ಣ ಮೆಹಂದಿ ಹಾಕುತ್ತಾರೆ. ತುಂಬಾ ಸುಂದರ ಮತ್ತು ನೀಟಾಗಿ ಮದುರಂಗಿ ಚಿತ್ತಾರಗಳನ್ನು ಬಿಡಿಸುವ ಅವರಿಗೆ ಮೆಹಂದಿಯ ಪ್ರಕಾರಗಳು ತಿಳಿದಿಲ್ಲ. ಆದರೆ ಅವರು ಚಿತ್ರ ಬಿಡಿಸುವ ಕಾರಣ ಅವರದೇ ಸ್ವಂತ ಡಿಸೈನ್ ಗಳನ್ನು ಹಾಕುತ್ತಾರೆ.

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾಂಜಲಿ ಧಾರಾವಾಹಿಯಲ್ಲಿ ಕಿರಣ್ ಪಾತ್ರಧಾರಿಯಾಗಿ ನಟಿಸಿರುವ ರವಿ  “ಇಂದು ನಾನು ಎಲ್ಲೇ ಹೋದರೂ ಜನ ನನ್ನನ್ನು ಕಿರಣ್ ಎಂದೇ ಗುರುತಿಸುತ್ತಾರೆ. ಅಲ್ಲದೇ ಧಾರಾವಾಹಿಯ ಕೆಲವು ಸಂಚಿಕೆಯಲ್ಲಿ ನನ್ನ ಚಿತ್ರಕಲೆಯು ಪ್ರಸಾರವಾಗಿದೆ. ಅಷ್ಟೇ ಅಲ್ಲದೇ ಜನ ತನ್ನ ಚಿತ್ರಕಲೆಯ ಬಗ್ಗೆಯೂ ಅಪಾರ ಗೌರವವನ್ನು ವ್ಯಕ್ತಪಡಿಸುವಾಗ ತುಂಬಾ ಸಂತೋಷವಾಗುತ್ತದೆ. ಒಬ್ಬ ಉತ್ತಮ ಕಲಾವಿದನಿಗೆ ಇದಕ್ಕಿಂತ ಬೇರೇನು ಬೇಕು ಎನ್ನುತ್ತಾರೆ. ಮುದ್ದು ಮುಖದ ಈ ಕರಾವಳಿಯ ಹುಡುಗ ನಟನಾಗಿ ಗುರುತಿಸಿಕೊಂಡರೂ ಚಿತ್ರ ಕಲೆಗೆ ಅವರ ಮೊದಲ ಆದ್ಯತೆ. ಅವರ ಕುಂಚದಿಂದ ಮತ್ತಷ್ಟು ನಯನ ಮನೋಹರವಾ ಕಲಾಕೃತಿಗಳು ಮೂಡಿ ಬರಲಿ ಎಂದು ಹಾರೈಸೋಣ. 

- ಅನಿತಾ ಬನಾರಿ 


3 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್