ಉದಯೋನ್ಮುಖರು

ಸುಂದರನಾಗಿ ಬದಲಾದ ನಂಜುಂಡ /’ಸುಂದರಾಂಗನಾಗಿ ನಂಜುಂಡ
0

ಟಿ. ಎನ್ ಸೀತಾರಾಮ್ ನಿರ್ದೇಶನದ ಮುಕ್ತ ಧಾರಾವಾಹಿಯ ನಂಜುಂಡ ಇದೀಗ ಮತ್ತೊಮ್ಮೆ ಕಿರಿತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಐದು ವರುಷಗಳ ಬಳಿಕ! ಸುವರ್ಣವಾಹಿನಿಯ ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ಸುಂದರನಾಗಿ ಅಭಿನಯಿಸುತ್ತಿರುವ ಅಜಯ್ ಕಿರುತೆರೆ ಪ್ರಿಯರಿಗೆ ನಂಜುಂಡ ಎಂದೇ ಚಿರಪರಿಚಿತ. ಅವರ ನಿಜ ನಾಮಧೇಯ ನಂಜುಂಡ ಆಗಿರಬಹುದೇನೋ ಎಂಬಷ್ಟರ ಮಟ್ಟಿಗೆ! 

ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ಇಬ್ಬರೂ ಅಣ್ಣಂದಿರ ಮುದ್ದಿನ ತಮ್ಮನಾಗಿ ಅಜಯ್ ಕಾಣಿಸಿಕೊಂಡಿದ್ದಾರೆ. ತುಂಬಾ ಜಾಲಿಯಾಗಿರುವ ಪಾತ್ರ. ಬೆಳಗ್ಗೆ ಜಿಮ್ ವರ್ಕೌಟ್ ಎಂದು ಕಾಲ ಕಳೆಯುವ ಸುಂದರ ಸಂಜೆಯಾದರೆ ಸಾಕು ಪಾರ್ಟಿ, ಹುಡುಗಿಯರು ಅಂಥ ಸಿಕ್ಕಾಪಟ್ಟೆ ಬಿಂದಾಸ್ ಆಗಿರುತ್ತಾನೆ. 

ಮುಕ್ತ ಧಾರಾವಾಹಿಯ ನಂಜುಂಡ ಪಾತ್ರದ ಅನಂತರ ಸುಮಾರು ಐದು ವರುಷಗಳ ಸುದೀರ್ಘ ಬ್ರೇಕ್ ತೆಗೆದುಕೊಂಡಿದ್ದ ಅಜಯ್ ಅವರು ಚೆನ್ನೈಯಲ್ಲಿದ್ದರು. ತಮಿಳು ಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಅವರು ಸದ್ಯ ಕಮಲ್ ಹಾಸನ್ ಅವರ ಉತ್ತಮ ವಿಲನ್ ಚಿತ್ರದಲ್ಲಿ ನಟಿಸಿರುತ್ತಾರೆ. ಹಾಗೆಯೇ ವೆಟ್ರಿಮಾರನ್ ಅವರ ಚಿತ್ರದಲ್ಲಿ ಎರಡನೇ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಷ್ಟು ಮಾತ್ರವಲ್ಲದೇ ಈಗ ಹಿಂದಿ ಮತ್ತು ತಮಿಳು ಎರಡು ಭಾಷೆಗಳಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ಬ್ಯುಸಿಯಾಗಿರುವ ಅಜಯ್ ರಂಗಭೂಮಿಯಲ್ಲೂ ಸಕ್ರಿಯವಾಗಿದ್ದವರು. ಕನ್ನಡ ನಾಟಕ ಮಾತ್ರವಲ್ಲದೇ ತಮಿಳು, ಹಿಂದಿ ಭಾಷೆಯ ನಾಟಕಗಳಲ್ಲೂ ಬಣ್ಣ ಹಚ್ಚಿರುವ ಇವರು ಭಾರ್ಗವಿ ನಾರಾಯಣ್ ಅವರ ನಾಟಕ ತಂಡದಲ್ಲೂ ಗುರುತಿಸಿಕೊಂಡವರು.

ಶಕುನಿ ಎಂಬ ಏಕಪಾತ್ರಭಿನಯದಲ್ಲಿ ಅಭಿನಯಿಸುವ ಮೂಲಕ ಮೊದಲ ಬಾರಿಗೆ ಬಣ್ಣ ಹಚ್ಚಿದ್ದ ಅಜಯ್ ರಾಜ್ ನಡನೆ ರಕ್ತಗತವಾಗಿ ಬಂದಿದೆ. ಅಜ್ಜ ಅಜ್ಜಿಯ ಕಾಲದಿಂದಲೂ ರಂಗಭೂಮಿಯ ನಂಟನ್ನು ಹೊಂದಿದ್ದ ಕುಟುಂಬ ಅವರದು. ಮಿತ್ರ ಸಂಘ ಕಲಾವಿದರು ಎಂಬ ತಂಡದ ಮುಖೇನಮನೆ ಮುಂದೆ ಇರುವ ದೊಡ್ಡ ಜಾಗದಲ್ಲಿ ನಾಟಕಗಳನ್ನು ಮಾಡಿಸುತ್ತಿದ್ದರು. ಮನ್ವಂತರ, ಮುಕ್ತ ಸೇರಿದಂತೆ ಸುಮಾರು ಹದಿನೆಂಟು ಧಾರಾವಾಹಿಗಳಲ್ಲಿ ನಟಿಸಿರುವ ಅಜಯ್ ಅವರ ಮೊದಲ ಸಿನಿಮಾ ರಾಕಿ. ನನ್ನ ಲೈಫಲ್ಲಿ ಚಿತ್ರದಲ್ಲಿ ನಟಿಸಿರುವ ಅಜಯ್ ಪ್ರದೇಶ ಸಮಾಚಾರ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಡೈಮಂಡ್ ಕ್ರಾಸ್ ಅನ್ನುವ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಲ್ಕು ನರ ನಾಯಕರ ಪೈಕಿ ಅಜಯ್ ರಾಜ್ ಕೂಡಾ ಒಬ್ಬರು. “ನಾನು ಸುಮಾರು ಐದು ವರುಷಗಳ ನಂತರ ಮತ್ತೊಮ್ಮೆ ಕಿರುತೆರೆಯಲ್ಲಿ ಬಣ್ಣ ಹಚ್ಚಿದ್ದೇನೆ ಎಂದರೆ ಅದಕ್ಕೆ ನಿರ್ದೇಶಕ ಪವನ್ ಅವರೇ ಕಾರಣ. ನಾನು ಮತ್ತು ಪವನ್ ತುಂಬಾ ಹಳೆಯ ಗೆಳೆಯರು. ಗೆಳೆತನಕ್ಕೆ ಕಟ್ಟು ಬಿದ್ದು ನಾನು ನಟಿಸಲು ಒಪ್ಪಿಕೊಂಡೆ ಎಂದರೆ ತಪ್ಪಾಗಲಾರದು’’ ಎಂದು ನಟನಾ ಪಯಣವನ್ನು ಬಿಚ್ಚಿಡುತ್ತಾರೆ. 

ಈ ಐದು ವರುಷಗಳಲ್ಲಿ ಕಿರುತೆರೆಯಲ್ಲಿ ಸಾಕಷ್ಟು ತರಹದ ಬದಲಾವಣೆಗಳಿವೆ. ಅದಕ್ಕೆ ಸತ್ಯಂ ಶಿವಂ ಸುಂದರಂ ಕೂಡಾ ಹೊರತಾಗಿಲ್ಲ. ಧಾರವಾಹಿಯನ್ನು ಸಿನಿಮಾದ ರೀತಿಯಲ್ಲಿ ಚಿತ್ರೀಕರಿಸುತ್ತಿದ್ದಾರೆ. ಮೇಕಿಂಗ್ ವಿಚಾರದಲ್ಲಿ ಮಾತ್ರವಲ್ಲದೇ ತಾಂತ್ರಿಕ ವಿಚಾರಗಳಲ್ಲೂ ಅಗಾಧ ರೀತಿಯ ಬದಲಾವಣೆಯಾಗಿದೆ ಎನ್ನುತ್ತಾರೆ ಅಜಯ್. 

ಹೆಚ್ಚಾಗಿ ಹಿಂದಿ ಮತ್ತು ತಮಿಳು ಸಿನಿಮಾ ರಂಗದಲ್ಲಿ ಬ್ಯುಸಿಯಾಗಿರುವ ಅಜಯ್ ತಮ್ಮ ವಿಭಿನ್ನ ಶೈಲಿಯ ನಟನೆಯ ಮೂಲಕ ಕಿರುತೆರೆ ವೀಕ್ಷಕರಿಗೆ ಮನೋರಂಜನೆಯ ರಸದೌತನವನ್ನು ಉಣಬಡಿಸುತ್ತಿರುವುದರಲ್ಲಿ ಎರಡು ಮಾತಿಲ್ಲ. ಕಿರುತೆರೆ ಪ್ರಿಯರಿಗೆ ಮತ್ತೊಮ್ಮೆ ಪ್ರೀತಿಯ ನಂಜುಂಡ ಮರಳಿ ದೊರೆತ ಖುಷಿ. ಆ ಖುಷಿ ಸದಾ ಕಾಲ ಮುಂದುವರೆಯಲಿ. 

- ಅನಿತಾ ಬನಾರಿ 


4 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್