ಉದಯೋನ್ಮುಖರು

ಬಣ್ಣದ ಲೋಕದಲ್ಲಿ ಕರಾವಳಿಯ ಪ್ರತಿಭೆ / ಕಿರುತೆರೆ ಮತ್ತು ಬೆಳ್ಳಿತೆರೆಗಳಲ್ಲಿ ದೀಪಕ್ ಶೆಟ್ಟಿ ಕಮಾಲ್
0

ಎಲ್ಲರನ್ನೂ ತನ್ನತ್ತ ಕೈ ಬೀಸಿ ಕರೆಯುವ ನಟನಾ ಜಗತ್ತಿನಲ್ಲಿ ಇಂದು ಹೊಸ ಹೊಸ ಮುಖಗಳಿಗೇನು ಕೊರತೆ ಇಲ್ಲ. ತಮ್ಮದೇ ಆದ ವಿಭಿನ್ನ ನಟನಾ ಶೈಲಿಯಿಂದ ಪ್ರೇಕ್ಷಕರ ಮನದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವುದು ಪ್ರತಿ ಒಬ್ಬ ಕಲಾವಿದನ ಕನಸು. ಅಂತಹ ಕನಸನ್ನು ನನಸು ಮಾಡ ಹೊರಟಿರುವ ಈ ಪ್ರತಿಭೆಯ ಹೆಸರು ದೀಪಕ್ ಶೆಟ್ಟಿ. ವಿಭಿನ್ನ ಶೈಲಿಯ ನಟನೆಯ ಮೂಲಕ ಕಿರುತೆರೆ ಪ್ರಿಯರ ಮನ ಸೆಳೆದಿರುವ ಇವರ ಹೆಸರು ದೀಪಕ್ ಶೆಟ್ಟಿ ಎಂದು ಹಲವರಿಗೆ ತಿಳಿದೇ ಇಲ್ಲ!  ಲವಲವಿಕೆಯ ಜಾನಕಿ ರಾಮ ಎಂದೇ ಜನಪ್ರಿಯವಾಗಿರುವ ದೀಪಕ್ ಶೆಟ್ಟಿ ಸದ್ಯ ನಿಹಾರಿಕಾ ಧಾರಾವಾಹಿಯಲ್ಲಿ ರಾಜನಾಥ್ ಯಾಜಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ನಟನಾ ಬದುಕಿನ ಮತ್ತಷ್ಟು ವಿವರ ಗಳು ನಿಮಗಾಗಿ....

 ನಿಮ್ಮ ಪರಿಚಯ?

ನನ್ನ ಹೆಸರು ದೀಪಕ್ ಶೆಟ್ಟಿ. ನಾನು ಮೂಲತಃ ಮಂಗಳೂರಿನವನು. 

ನೀವು ನಟಿಸಿರುವಂತಹ ಧಾರಾವಾಹಿಗಳು? 

ಕಾದಂಬರಿ, ಪ್ರೀತಿ ಇಲ್ಲದ ಮೇಲೆ, ಬಂದೇ ಬರುತಾವ ಕಾಲ, ನಿಗೂಢ, ಮುತ್ತಿನ ತೆನೆ, ಲವಲವಿಕೆ ನಾನು ಅಭಿನಯಿಸಿದಂತಹ ಧಾರಾವಾಹಿಗಳು. ಪ್ರಸ್ತುತ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಿಹಾರಿಕಾ ಧಾರಾವಾಹಿಯಲ್ಲಿ ರಾಜನಾಥ್ ಯಾಜಿ ಯಾಗಿ ಕಾಣಿಸಿಕೊಂಡಿದ್ದೇನೆ. 

ನಿಹಾರಿಕಾ ದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳುವುದಾದರೆ? 

ಸ್ಟೈಲಿಶ್ ತಂದೆಯ ಪಾತ್ರ ಇದಾಗಿದ್ದು ಕಾಣುವಾಗ ಪಾಸಿಟಿವ್ ಪಾತ್ರವೇನೂ ಎಂದೆನಿಸುತ್ತದೆ. ಆದರೆ ಪಾತ್ರವು ಅದೆಷ್ಟು ನೆಗೆಟಿವ್ ಗುಣಗಳನ್ನು ಹೊಂದಿದೆ ಎಂಬುದು ಸೀರಿಯಲ್ ಪ್ರಿಯರಿಗೆ ಮಾತ್ರ ಗೊತ್ತು! ರಾಜನಾಥ್ ಯಾಜಿ ಗೆ ಆಸ್ತಿ, ಪವರ್ ಅದೆಷ್ಟು ಮುಖ್ಯ ಎಂದರೆ ಅವು ಎರಡನ್ನು ಗಳಿಸಲು ಆತ ಏನೂ ಬೇಕಾದರೂ ಮಾಡಲು ಸಿದ್ಧ. 

ನಟನೆ ಬಗ್ಗೆ ಬಾಲ್ಯದಿಂದಲೂ ಇಷ್ಟ ಇತ್ತ? 

ಹೌದು. ಅದು ನನ್ನ ಬಾಲ್ಯದ ಕನಸು. ಚಿಕ್ಕಂದಿನಿಂದಲೂ ಶುರುವಾದ ಈ ಆಸೆ ಆಮೇಲೆ ಬೇರೆ ಬೇರೆ ಪಾತ್ರ ಮಾಡಬೇಕು ಎಂಬ ಕನಸಾಗಿ ಮುಂದೆ ಇದೇ ನನ್ನ ಜೀವನ, ನಾನು ಇದರನ್ನೇ ಮುಂದುವರಿಸಬೇಕು ಎಂದು ಅನ್ನಿಸಿತು. ಅದಕ್ಕಾಗಿ ದುಬೈಯಲ್ಲಿದ್ದ ಕೆಲಸವನ್ನು ಬಿಟ್ಟು ಬಂದೆ. ಅಷ್ಟರ ಮಟ್ಟಿಗೆ ಈ ಕ್ಷೇತ್ರ ನನ್ನನ್ನು ಸೆಳೆದಿದೆ. 

ಮೊದಲ ಬಾರಿ ಕ್ಯಾಮೆರಾ ಎದುರಿಸಿದಾಗ ಆದ ಅನುಭವ? 

ಭಯವಾಗಿತ್ತು. ಕ್ಯಾಮೆರಾ ಮುಂದೆ ನಿಂತಿದ್ದೇನೆ ಎಂಬ ಕಾರಣಕ್ಕಲ್ಲ, ಬದಲಿಗೆ ಮನೆಯಲ್ಲಿ ಗೊತ್ತಾಗುತ್ತದೆ ಎಂದು! ಜೊತೆಗೆ ಇಷ್ಟು ವರುಷದ ಆಸೆ ಈಡೇರಿತಲ್ಲ ಎಂಬ ಖುಷಿ. ಜೊತೆಗೆ ಮೊದಲ ಆಡಿಶನ್ ಆದ ಕಾರಣ ಸ್ವಲ್ಪ ಮಟ್ಟಿಗೆ ಆತಂಕವೂ ಇತ್ತು. ಅವಕಾಶಗಳನ್ನು ಬಾಚಿಕೊಳ್ಳುವುದಕ್ಕಿಂತ ಸಿಕ್ಕಿರುವ ಅವಕಾಶಗಳನ್ನು ಬಳಸಿಕೊಳ್ಳುವುದು ಹೇಗೆ ಎಂಬ ಆಲೋಚನೆಯೂ ಆ ಕ್ಷಣ ಬಂದಿತ್ತು. 

ನಟನಾ ಕ್ಷೇತ್ರಕ್ಕೆ ಬರಬೇಕು ಎಂದು ಅನ್ನಿಸಿದ್ದು ಯಾಕೆ ?

ಶಾಲೆಗೆ ಹೋಗುತ್ತಿರುವಾಗ ಶಿವರಾಜ್ ಕುಮಾರ್, ವಿಷ್ಣುವರ್ಧನ್, ರವಿಚಂದ್ರನ್, ಶಂಕರ್ ನಾಗ್ ಅವರ ಸಿನಿಮಾಗಳನ್ನೇ  ಜಾಸ್ತಿ ನೋಡಿದ್ದು. ಅವರೆಲ್ಲರ ರೀತಿಯ ನಟನೆ, ಫೈಟಿಂಗ್ ನನ್ನನ್ನು ವಿಶೇಷವಾಗಿ ಆಕರ್ಷಿಸಿತ್ತು ಎಂದು ಹೇಳಿದರೆ ತಪ್ಪಾಗಲಾರದು. ನನಗೂ ಅವರ ತರ ಆಹಬೇಕು ಎಂಬ ಬಯಕೆ. ಅದೆಷ್ಟೋ ಸಲ ನಟರು ರೀಲ್ ಲೈಫ್ ನಲ್ಲಿ ಆಡೋದನ್ನ ನಾನು ನನ್ನ ರಿಯಲ್ ಲೈಫ್ ನಲ್ಲಿ ಅನುಕರಣಿಸುತ್ತಿದ್ದೆ. ಅದಕ್ಕೆ ನನ್ನ ಸ್ನೇಹಿತರು ನನಗೆ ಸ್ಟೈಲ್ ರಾಜಾ ಎಂಬ ಬಿರುದನ್ನು ಕೊಟ್ಟಿದ್ದರು! 

ಸ್ಫೂರ್ತಿ? 

ಡಾ. ರಾಜ್ ಕುಮಾರ್. ನಾನು ಎಲ್ಲ ನಟರೊಳಗಿರುವ ವಿಶೇಷ ವಿಷಯಗಳನ್ನ ಕಲಿಯುವ ಪ್ರಯತ್ನ ಯಾವಾಗಲೂ ಮಾಡುತ್ತಿರುತ್ತೇನೆ. ವಿಷ್ಣುವರ್ಧನ್ ಸ್ಟೈಲ್, ಶಿವರಾಜ್ ಕುಮಾರ್ ಇನ್ ವಾಲ್ವ್ ಮೆಂಟ್, ಪ್ರಭಾಕರ್ ಫೈಟಿಂಗ್, ರವಿಚಂದ್ರನ್ ಅವರ ಹೀರೋಯಿಸಂ ಇವೆಲ್ಲಾ ನನಗೆ ಸ್ಫೂರ್ತಿಯಾಗಿದೆ ಅಂತಾನೇ ಹೇಳ್ಬಹುದು. 

ದೀಪಕ್ ಶೆಟ್ಟಿ ಅಂದಾಕ್ಷಣ ಜನರಿಗೆ ನೆನಪಾಗುವ ಪಾತ್ರ? 

ಲವಲವಿಕೆಯ ಜಾನಕಿರಾಮ್ ಪಾತ್ರ. ಸಂತೋಷದ ಸಂಗತಿ ಎಂದರೆ ಜಾನಕಿರಾಮ್ ಪಾತ್ರಕ್ಕೂ ರಾಜನಾಥ್  ಯಾಜಿ ಪಾತ್ರಕ್ಕೆ ನನಗೆ ಅವಾರ್ಡ್ ಬಂತು. ಇದರಿಂದ ಜನ ನನ್ನನ್ನು ಸ್ವೀಕರಿಸಿದ್ದಾರೆ ಎಂಬುದು ತಿಳಿಯುತ್ತದೆ. 

ಲವಲವಿಕೆ ಮತ್ತು ನಿಹಾರಿಕಾ ದಲ್ಲಿ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀರಾ? 

ಲವಲವಿಕೆಯಲ್ಲಿ ಪಾತ್ರ ಚೆನ್ನಾಗಿತ್ತು ಅಂಥ ಒಪ್ಕೊಂಡೆ. ತಂದೆ ಪಾತ್ರ ಆದ್ರೂ ಅಭಿನಯಕ್ಕೆ ಅವಕಾಶವಿತ್ತು. ನಾಯಕನಷ್ಟೇ ಪ್ರಾಮುಖ್ಯತೆಯೂ ಇತ್ತು. ಇನ್ನು ನಿಹಾರಿಕಾದಲ್ಲೂ ಹಾಗೆ. ನೆಗೆಟಿವ್ ಪಾತ್ರ. ಸಿನಿಮಾ ರೀತಿಯಲ್ಲಿ ಶೂಟಿಂಗ್ ಮಾಡ್ತಿದ್ದಾರೆ. ಆ ಪಾತ್ರಕ್ಕೆ ಬೆಸ್ಟ್ ವಿಲನ್ ಆವಾರ್ಟ್ ಕೂಡಾ ಬಂದಿತ್ತು. 

ನಟನೆ ಕುರಿತು ತರಬೇತಿ ಪಡೆದಿದ್ದೀರಾ? ರಂಗಭೂಮಿ ನಂಟು ಇದೆಯಾ? 

ಕಾಲೇಜಿನ ದಿನಗಳಲ್ಲಿ ಕ್ಲಾಸ್ ಮಿಸ್ ಮಾಡುವ ಉದ್ದೇಶದಿಂದ ನಾಟಕ ಪ್ರಾಕ್ಟೀಸ್ ಗೆ ಹೋಗ್ತಾ ಇದ್ದೆ. ಕಾಲೇಜಿನಲ್ಲಿರುವಾಗ ನಾಟಕದಲ್ಲಿ ಕಾನ್ ಸ್ಟೇಬಲ್ ಪಾತ್ರ ಮಾಡಿದ್ದೆ. ಅದರಲ್ಲಿ ಹೀರೋ ವನ್ನ ಎಳೆದುಕೊಂಡು ಹೋಗೋ ಪಾತ್ರ. ನಾಟಕದ ನಿರ್ದೇಶಕರಾಗಿದ್ದ ಸಾಯಿನಾಥ್ ಸರ್ ಗೆ ನನ್ನ ನಟನೆ ಇಷ್ಟವಾಗಿ ನನ್ನನ್ನೇ ನಾಯಕನಾಗಿ ಮಾಡಿಬಿಟ್ಟರು. ನಾಟಕ ಚೆನ್ನಾಗಿ ಬಂತು. ಆಗ ನನಗೆ ನಾನು ಕೂಡಾ ನಟಿಸಬಲ್ಲೆ ಎಂಬ ಆತ್ಮವಿಶ್ವಾಸ ಬಂದಿತು. 

ಬಣ್ಣದ ಲೋಕದ ಬಗ್ಗೆ ನಿಮ್ಮ ಅಭಿಪ್ರಾಯ?

 ಇದೊಂದು ಮಾಯೆ! ನಾನು ಈ ಮೊದಲು ಬೇಡ ಎಂದು ಬಿಟ್ಟು ಹೋದ ಕ್ಷೇತ್ರವಿದು. ಮಾಯೆ ಅಲ್ಲ ಎಂದಿದ್ದೆ ಮತ್ತೊಮ್ಮೆ ತಿರುಗಿ ಬರುತ್ತಿರಲಿಲ್ಲ. ನನ್ನ ಹಾಗೇ ಅದೆಷ್ಟೋ ಜನ ಕಲಾವಿದರು ಬಿಟ್ಟು ಹೋಗಿ ಮತ್ತೆ ಪುನಃ ಬಂದು ಸೇರಿದ್ದಾರೆ. ನಿಜ ಹೇಳಬೇಕೆಂದರೆ ಇದೊಂಥರಾ ಆರಾಧನೆ. ಬಣ್ಣದ ಲೋಕ ನಮಗೆ ಎಲ್ಲಾ ತರಹದ ವಿಷಯಗಳನ್ನು ಹೇಳಿಕೊಡುತ್ತೆ. ನಾವು ಏನನ್ನು ಆರಿಸಿಕೋಳ್ತಿವಿ ಅನ್ನೋದು ಮುಖ್ಯ. 

ನಟನೆಯ ಹೊರತು? 

ಕೇವಲ ನಟನೆ ಅಷ್ಟೇ! ಇನ್ನೇನು ಇಲ್ಲ. ಮುಂದೆ ಸಾಧ್ಯವಾದರೆ, ಭಗವಂತ ಅನುಗ್ರಹಿಸಿದರೆ ಹೆಣ್ಮಕ್ಕಳ ಓದಿಗೆ, ಓಳಿತಿಗೆ ಏನಾದ್ರೂ ಸಹಾಯ ಮಾಡಬೇಕು ಅನ್ನೋ ಬಯಕೆ. ಆದಷ್ಟ ಬೇಗ ಆ ಶಕ್ತಿ ಭಗವಂತ ನೀಡಲಿ ಎಂಬುದೇ ನನ್ನ ಪ್ರಾರ್ಥನೆ. 

ನಟನಾ ಕ್ಷೇತ್ರ ನಿಮಗೆ ಕಲಿಸಿದ್ದು?

ಶಿಸ್ತು. ಮಾತ್ರವಲ್ಲ ಸೂಕ್ಷ್ಮ ವಿಚಾರಗಳಿಗೂ ಗಮನ ಕೊಡಬೇಕು ಎಂಬುದು ಅರ್ಥವಾಯತು. ತಾಳಿದವನು ಬಾಳಿಯಾನು ಅನ್ನೋದು ಇಲ್ಲಿ ತುಂಬಾ ಸತ್ಯ ಅನ್ನಿಸುತ್ತೆ. 

ನಿಮಗೆ ಸಿಕ್ಕ ಬೆಸ್ಟ್ ಕಾಂಪ್ಲಿಮೆಂಟ್? 

ಜನ ನನ್ನ ರಾಣಾ ದಗ್ಗುಬಟ್ಟಿ ಅಂಥ ಅಂದ್ಕೊಂಡು ಫೋಟೋ ತೆಗೆಸಿಕೊಳ್ಳೋದಕ್ಕೆ ಬರ್ತಾರೆ. ಇನ್ನು ಲವಲವಿಕೆ ಧಾರಾವಾಹಿ ಸಮಯದಲ್ಲಿ ಹೀರೋಗಿಂತ ಹೀರೋ ಅಪ್ಪನೇ ಸೂಪರ್ ಅಂತ ಕೇಳಿದ್ದು. 

ಕಲಾವಿದನಾಗಿ ನಿಮ್ಮ ಮುಂದಿನ ಯೋಜನೆ? 

ಸಿನಿಮಾದಲ್ಲಿ ಫೈಟ್ ಮಾಡಲು ಸುಲಭವಾಗಲಿ ಎಂಬ ಉದ್ದೇಶದಿಂದ ಕಿಕ್ ಬಾಕ್ಸಿಂಗ್ ಕಲಿಯುತ್ತಿದ್ದೇನೆ. ನಂದ ಕಿಶೋರ್ ಮತ್ತು ಚೇತನ್ ಅವರೊಂದಿಗೆ ಒಂದು ಪ್ರಾಜೆಕ್ಟ್ ಮಾಡ್ತಾ ಇದ್ದೇನೆ. 

ಕನಸಿನ ಪಾತ್ರ? 

ಪೋಲೀಸ್ ಆಫೀಸರ್ ಮತ್ತು ಸೈನಿಕನ ಪಾತ್ರ. ಒಬ್ಬ ದಕ್ಷ ಪೋಲೀಸ್ ನ ನಿಜವಾದ ಜೀವನ, ಅವರಿಗೆ ಬರುವ ಕಷ್ಟಗಳು, ಇರುವ ಒತ್ತಡಗಳನ್ನ ತೋರಿಸುವ ಪಾತ್ರ. ಅದೇ ರೀತಿ ಒಬ್ಬ ದೇಶ ಕಾಯುವ ಸೈನಿಕನಿಗೆ ಇರುವ ಕೊರತೆ, ಕಷ್ಟ ನಷ್ಟಗಳನ್ನ ತೋರಿಸಿಕೊಡುವ ಪಾತ್ರ.

ಹವ್ಯಾಸ? 

ಜಿಮ್ ವರ್ಕ್ ಔಟ್. ಈಗಷ್ಟೇ ಕಿಕ್ ಬಾಕ್ಸಿಂಗ್ ಶುರು ಮಾಡಿದ್ದೇನೆ. ಶೂಟಿಂಗ್ ಇಲ್ಲದ ವೇಳೆಯಲ್ಲಿ ಗೆಳೆಯರನ್ನ ಭೇಟಿ ಮಾಡ್ತೇನೆ. ನಂಗೆ ಒಬ್ಬನೇ ಇರೋದಕ್ಕೆ ಆಗೋದಿಲ್ಲ. ಸುತ್ತಾ ಜನ ಇರ್ಬೇಕು. ನಗಿಸ್ತಾ, ನಗ್ತಾ ಇರ್ಬೇಕು. 

ಯಾವುದೆಲ್ಲಾ ಸಿನಿಮಾದಲ್ಲಿ ಅಭಿನಯಿಸಿದ್ದೀರಿ? 

ನೀನೆ ನೀನೆ, ಟೈಗರ್, ಶ್ರೀಕಂ ಠ, ಭರ್ಜರಿ, ಗೌಡ್ರ ಹೋಟ್ಲು, ಅಸತೋಮಾ ಸದ್ಗಮಯ.

ಈ ಸಮಯದಲ್ಲಿ ನೀವು ಸ್ಮರಿಸಿಕೊಳ್ಳುವುದಾದರೆ? 

ತಂದೆ ತಾಯಿ. ತಂದೆ ನಾಟಕ ಮಾಡ್ತಾ ಇದ್ರು. ಅವರಿಗೆ ನನ್ನನ್ನು ಬಿಗ್ ಸ್ಕ್ರೀನ್ ಮೇಲೆ ನೋಡಿ ಖುಷಿಯಾಗುತ್ತಿತ್ತೇನೋ? ತಾಯಿಗೆ ನಾನು ಬಣ್ಣದ ಲೋಕಕ್ಕೆ ಬರುವುದು ಇಷ್ಟವೇ ಇರಲಿಲ್ಲ. ಭಯ ಪಡ್ತಾ ಇದ್ರು. ಇವಾಗ ನನ್ನನ್ನು ನೋಡಿ ಅಮ್ಮನೂ ಖುಷಿ ಪಡ್ತಾ ಇದ್ರೆನೋ? ನಾನು ಬೆಳೆತರೋದನ್ನ ನೋಡೋದಕ್ಕೆ ಅವರಿಬ್ಬರು ಇದ್ದಿದ್ರೆ ತುಂಬಾ ಚೆನ್ನಾಗಿತ್ತು. 

- ಅನಿತಾ ಬನಾರಿ 


4 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್