ಉದಯೋನ್ಮುಖರು

ಧಾರಾವಾಹಿಗಳಲ್ಲೇ ಸಂಪ್ರಿತ ಸುಪ್ರೀತಾ ಶೆಟ್ಟಿ
0

ರಂಗಭೂಮಿಯಲ್ಲಿ ವೃತ್ತಿ ಆರಂಭಿಸಿ ಸದ್ಯ ಕಿರುತೆರೆಯಲ್ಲಿ ಮಿಂಚುತ್ತಿರುವ ಸುಪ್ರೀತಾ ಶೆಟ್ಟಿ ಇಂದು ಕಾಂಚನಾ ಎಂದೇ ಪರಿಚಿತರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕುಲವಧು ಧಾರಾವಾಹಿಯ ಕಾಂಚನಾ ಪಾತ್ರಧಾರಿ ಸುಪ್ರೀತಾ ಶೆಟ್ಟಿಯನ್ನು ಇಂದು ಗೊತ್ತಿಲ್ಲದವರಿಲ್ಲ. 

ಖಳನಾಯಕಿಯಾಗಿರುವ ಕಾಂಚನಾ ಫೇಮಸ್ ಆಗಿರುವುದೇ ಬಟ್ಲರ್ ಇಂಗ್ಲೀಷ್ ನಿಂದ. ತಪ್ಪು ತಪ್ಪು ಇಂಗ್ಲೀಷ್ ಮಾತನಾಡುವ ಅವರು ತಮ್ಮ ಡೈಲಾಗ್ ಗಳಿಂದ, ಅದಕ್ಕೆ ಒಪ್ಪುವಂಥ ಅಭಿನಯದಿಂದ ವೀಕ್ಷಕರನ್ನೇನೂ ನಗಿಸುತ್ತಾರೆ. ನಗುವಿನ ಹೊತರಾಗಿ ಆಕೆ ಮನೆಯೊಡೆಯುವ ಕಾಯಕವನ್ನು ಕೂಡಾ ಮಾಡುತ್ತಿರುತ್ತಾರೆ. ಮನೆಯವರ ಎದುರು ಒಳ್ಳೆಯ ಮಾತುಗಳನ್ನಾಡುತ್ತಾ, ವೇದ್ ನನ್ನು ಪ್ರತಿಬಾರಿಯೂ ಮನವೊಲಿಸಿ ಮನೆಯವರು ತನ್ನ ವಿರುದ್ಧ ಬಾರದಂತೆ ಜಾಗ್ರತೆಯಿಂದ ನಿಭಾಯಿಸುವ ಕಾಂಚನಾ ವೇದ್ ನನ್ನು ಸೇರಿಸಿ ಮನೆಯವರ ವಿರುದ್ಧವೇ ಷಡ್ಯಂತ್ರ ರೂಪಿಸುವ ಸೊಸೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. “ ಕುಲವಧುವಿನ ಕಾಂಚನಾ ಪಾತ್ರ ನಿಜಕ್ಕೂ ಕಷ್ಟ ಮತ್ತು ಅದು ತುಂಬಾ ಚಾಲೆಂಜಿಗ್ ಆದುದು. ಆ ಪಾತ್ರದಲ್ಲಿ ಮುಖ್ಯವಾದ ಅಂಶವೆಂದರೆ ತಪ್ಪು ತಪ್ಪು ಇಂಗ್ಲೀಷ್ ಮಾತನಾಡಬೇಕು. ಇಂಗ್ಲೀಷ್ ಭಾಷೆ ಚೆನ್ನಾಗಿ ಗೊತ್ತಿರುವ ನನಗೆ ಆ ಪಾತ್ರ ನಿಭಾಯಿಸುವುದು ನನ್ನಿಂದ ಸಾಧ್ಯವಾಗದೇನೂ ಎಂಬ ಭಯವಿತ್ತು. ಮೊದಲಿಗೆ ಕಷ್ಟವಾದರೂ ಈಗ ಅಭ್ಯಾಸವಾಗಿ ಹೋಗಿದೆ” ಎಂದು ಕಾಂಚನಾ ಪಾತ್ರವನ್ನು ವಿವರಿಸಿದರು ಸುಪ್ರೀತಾ. 

ಸಂಪ್ರದಾಯಸ್ಥ ಕುಟುಂಬದಿಂದ ಬಂದ ಸುಪ್ರೀತಾ ಮನೆಯವರ ತೀವ್ರ ವಿರೋಧದ ನಡುವೆ ನಟನಾ ಕ್ಷೇತ್ರಕ್ಕೆ ಕಾಲಿಟ್ಟವರು. ನಾಟಕಗಳ ಮೂಲಕ ಬಣ್ಣದ ಲೋಕದಲ್ಲಿ ಕಾಣಿಸಿಕೊಂಡ ಸುಪ್ರೀತಾ ರಂಗ ಸೌರಭ ಎಂಬ ರಂಗ ತಂಡದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡವರು. ಆರು ವರುಷಗಳ ಕಾಲ ರಂಗಭೂಮಿಯಲ್ಲಿ ಕೆಲಸ ಮಾಡಿರುವ ಸುಪ್ರೀತಾ 2006 ರಲ್ಲಿ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಸೌಂದರ್ಯ ಧಾರಾವಾಹಿಯಲ್ಲಿ ನಾಯಕಿಯ ಗೆಳತಿಯ ಪಾತ್ರದಲ್ಲಿ ನಟಿಸಿರುವ ಸುಪ್ರೀತಾ ಬಣ್ಣದ ಪಯಣ ನಿರಂತರವಾಗಿ ಸಾಗುತ್ತಿದೆ. ಮೌನರಾಗ, ಬದುಕು, ಮಾಂಗಲ್ಯ, ಕಲ್ಲು ಸಕ್ಕರೆ, ಲಕ್ಷ್ಮಿ, ಮತ್ತೆ ಬರುವನು ಚಂದಿರ, ವಾತ್ಸಲ್ಯ, ಗಾಳಿಪಟ, ಶ್ರೀಮತಿ ಭಾಗ್ಯಲಕ್ಷ್ಮಿ , ಅಂತರ, ಸೀತೆ, ಪರಮಪದ, ಕಂಜೂಸ್ ಕಮಂಗಿರಾಯ, ಗಾಯತ್ರಿ, ಸುಕನ್ಯಾ, ಪ್ರೇರಣಾ, ರಾಘವೇಂದ್ರ ವೈಭವ, ವಸುಧೈವ ಕುಟುಂಬ ಸೇರಿದಂತೆ 60 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಸುಪ್ರೀತಾ ನಟಿಸಿರುತ್ತಾರೆ. 

ಸೌಂದರ್ಯದಿಂದ ಶುರುವಾಗಿ ಕುಲವಧು ತನಕ ನಾನು ಅಭಿನಯಿಸಿದ ಧಾರಾವಾಹಿಗಳಲ್ಲಿ ಭಿನ್ನ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ ಎನ್ನುವ ಸುಪ್ರೀತಾಗೆ ಮೊದಲ ಬಾರಿ ಹೆಸರು ತಂದು ಕೊಟ್ಟದ್ದು ಮಾಂಗಲ್ಯ ಧಾರಾವಾಹಿ. ಇದೀಗ ಸುಪ್ರೀತಾ ಕಾಂಚನಾ ಎಂದೇ ಪರಿಚಿತರಾಗಿದ್ದರೂ ಈ ಮೊದಲು ಮಾಂಗಲ್ಯ ವಾಣಿ ಎಂದೇ ಮನೆ ಮಾತಾಗಿದ್ದರು. ಆ ಪಾತ್ರ ಅವರಿಗೆ ಅಷ್ಟೊಂದು ಹೆಸರು ತಂದುಕೊಟ್ಟಿತ್ತು. 

ಕುಲವಧುವಿನ ಹೊರತಾಗಿ ಸುಪ್ರೀತಾ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದುರ್ಗಾ ಧಾರಾವಾಹಿಯ ಶೀಲಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಏಕಕಾಲದಲ್ಲಿ ಎರಡು ಭಿನ್ನ ಭಿನ್ನ ಪಾತ್ರಗಳನ್ನು ನಿರರ್ಗಳವಾಗಿ ನಿಭಾಯಿಸುವ ಸುಪ್ರೀತಾ ಪತಿ ಪ್ರಮೋದ್ ಶೆಟ್ಟಿ ಕೂಡಾ ಕಲಾವಿದರು. ಮನೆಯವರ ಸಹಕಾರವಿಲ್ಲದೆ ಯಾವ ಕ್ಷೇತ್ರದಲ್ಲೂ ಗುರುತಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಸುಪ್ರೀತಾಗೆ ಪತಿ, ಅತ್ತೆ, ಮಾವ, ಹೆತ್ತವರು ಮತ್ತು ಮುದ್ದು ಮಗಳು ಇಬ್ಬನಿಯ ಬೆಂಬಲವಿದೆ. 

- ಅನಿತಾ ಬನಾರಿ 


5 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್