ಉದಯೋನ್ಮುಖರು

ಅಗ್ನಿಸಾಕ್ಷಿಯ ಅಂಜಲಿ ಎಂದೇ ಜನಜನಿತ ಈ ಸುಕೃತಾ!
0

ಮುದ್ದು ಮುಖ, ಸದಾ ಮುಗುಳುನಗು, ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕು ಎಂದೆನಸುವ ಇಂಪಾದ ದನಿ.. ಇದು ಸಕ್ಕರೆ ನಾಡಿನ ಚೆಲುವೆ ಸುಕೃತಾ ನಾಗ್ ಪರಿಚಯ. ಸುಕೃತಾ ನಾಗ್ ಯಾರಪ್ಪ ಎಂದು ಆಲೋಚಿಸುತ್ತಿದ್ದೀರಾ? ಹಾಗಿದ್ದರೆ ಇಲ್ಲಿ ಕೇಳಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, ನೂರಾರು ಪ್ರೇಕ್ಷಕರ ಮನ ಗೆದ್ದಿರುವ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿಯಲ್ಲಿ ತಂಗಿ ಪಾತ್ರಕ್ಕೆ ಜೀವ ತುಂಬುತ್ತಿರುವ ಸುಕೃತಾ ನಾಗ್ ಸದ್ಯಕ್ಕೆ ಅಂಜಲಿ ಎಂದೇ ಗುರುತಿಸಿಕೊಂಡಿದ್ದಾರೆ. 

ಅಣ್ಣ  ಸಿದ್ದಾರ್ಥ್ ಗೆ ಮುದ್ದಿನ ತಂಗಿಯಾಗಿ, ಅತ್ತಿಗೆ ಸನ್ನಿಧಿಗೆ ಒಲವಿನ ನಾದಿನಿಯಾಗಿರುವ ಅಂಜಲಿ ಮನೆಯ ಒಳಿತಿಗಾಗಿ ಸದಾ ಕಾಲ ಹೋರಾಡುವ ಸನ್ನಿಧಿಗೆ ಸಹಾಯ ಮಾಡುತ್ತಿರುತ್ತಾಳೆ. ಅಲ್ಲದೇ ಚಂದ್ರಿಕಾ ಅತ್ತಿಗೆ ಮಾಡುವ ಅನ್ಯಾಯವನ್ನು ಸಹಿಸದೇ ಅದರ ವಿರುದ್ಧ ಹೋರಾಡುವ ಪಾತ್ರ ಅಂಜಲಿಯದು. 

ಮೂಲತ ಸಕ್ಕರೆ ನಾಡಿನ ಸುಂದರಿ ಸುಕೃತಾ ಹುಟ್ಟಿ ಬೆಳೆದದ್ದು ಮಹಾನಗರಿ ಬೆಂಗಳೂರಿನಲ್ಲಿ. ಎಸ್. ನಾಗರಾಜು ಮತ್ತು ಎಂ. ಭಾಗ್ಯಲಕ್ಷ್ಮಿ ದಂಪತಿಯ ಪುತ್ರಿಯಾದ ಈಕೆ ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾದಂಬರಿ ಧಾರಾವಾಹಿ ಮೂಲಕ ನಟನಾ ಕ್ಷೇತ್ರದಲ್ಲಿ ಕಾಣಿಸಿಕೊಂಡ ಸುಕೃತಾಗೆ ಆಗ ಕೇವಲ ಒಂಭತ್ತು ವರುಷ! ಮುಂದೆ ಶಿವಾಲೀಲಾಮೃತ, ಪುರುಷೋತ್ತಮ, ಸರಸ್ವತಿ, ಮಹಾಭಾರತ ಸೇರಿದಂತೆ 20 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿಯರುವ ಸುಕೃತಾ ಇಂದು ಅಗ್ನಿಸಾಕ್ಷಿಯ ಅಂಜಲಿ ಎಂದೇ ಚಿರಪರಿಚಿತ. ಅಷ್ಟರಮಟ್ಟಿಗೆ ಅಂಜಲಿ ಪಾತ್ರ ಜನರ ಮನೆ, ಮನ ಗೆದ್ದು ಬಿಟ್ಟಿದೆ. 

ಸುಕೃತಾ ತಾನೊಬ್ಬಳೂ ನಟಿಯಾಗಬೇಕು ಎಂದು ಯಾವತ್ತೂ ಬಯಸಿರಲಿಲ್ಲ. ಅದು ಅವರಿಗೆ ಅಚಾನಕ್ ಆಗಿ ಸಿಕ್ಕ ಅವಕಾಶ. ಕಾರ್ಯಕ್ರಮವೊಂದರಲ್ಲಿ ಇವರ ನೃತ್ಯವನ್ನು ಕಂಡ ನಿರ್ದೇಶಕರೊಬ್ಬರು ಧಾರಾವಾಹಿಯಲ್ಲಿ ನಟಿಸುವಂತೆ ಆಫರ್ ನೀಡಿದರು. ಇದು ಅವರ ಬಣ್ಣದ ಬದುಕಿಗೆ ಮುನ್ನುಡಿ ಬರೆಯಿತು. ಜೊತೆಗೆ ಉತ್ತಮ ಡ್ಯಾನ್ಸರ್ ಆಗಿರುವ ಸುಕೃತಾ ಹಲವು ಡ್ಯಾನ್ಸ್ ಶೋ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೊದಲು ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸಿಂಗ್ ಸ್ಟಾರ್ ನಲ್ಲಿ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. 

ಇಂತಿಪ್ಪ ನಗುಮುಖದ ಬೆಡಗಿ ಇದೀಗ ಸಿನಿಮಾ ತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಹಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಬೆಳ್ಳಿತೆರೆಯಲ್ಲಿ ಅಭಿನಯಿಸಲು ತಯಾರಾಗಿದ್ದಾರೆ. ತಿಂಗಳ ಹಿಂದೆಯಷ್ಟೇ ಸಿನಿಮಾದ ಮುಹೂರ್ತ ನಡೆದಿದೆ. 

ಧಾರಾವಾಹಿ ಮತ್ತು ಸಿನಿಮಾ ಎರಡನ್ನು ನಿಭಾಯಿಸಿಕೊಂಡು ಹೋಗುತ್ತಿರುವ ಸುಕೃತಾ ಓದಿನಲ್ಲೂ ಮುಂದಿದ್ದಾರೆ. ನಟನೆಯ ಜೊತೆಗೆ ವಿದ್ಯಾಭ್ಯಾಸವೂ ಮುಖ್ಯ ಎಂಬುದು ಅವರ ಅಭಿಪ್ರಾಯ. ಸದ್ಯ ಎಂಸಿಎ ಓದುತ್ತಿರುವ ಸುಕೃತಾಗೆ ಮುಂದೆ ಐಎಎಸ್ ಮಾಡುವ ಬಯಕೆ. 

ಪೋಷಕರ ಬೆಂಬಲ ಇಲ್ಲದೇ ಏನನ್ನು ಸಾಧಿಸಲು ಸಾಧ್ಯವಿಲ್ಲ. ನನ್ನ ಯಶಸ್ಸಿಗೆ ಕುಟುಂಬದವರ ಪ್ರೋತ್ಸಾಹ ಕಾರಣ ಎನ್ನುವ ಈಕೆ ತಾನು ಈ ಕ್ಷೇತ್ರಕ್ಕೆ ಬಂದಿರುವುದರಿಂದ ತುಂಬಾ ತಾಳ್ಮೆ ಕಲಿತೆ. ಟೈಮ್ ಮ್ಯಾನೇಜ್ ಮಾಡುವುದು ಹೇಗೆ ಎಂಬುದು ತಿಳಿಯಿತು. ಅಷ್ಟು ಮಾತ್ರವಲ್ಲದೇ ನಟನೆಯ ಬಗ್ಗೆಯೂ ಸಾಕಷ್ಟು ಕಲಿತೆ ಎಂದು ಸಂತಸದಿಂದ ಹೇಳುತ್ತಾರೆ. 

ಸುಕೃತಾ ಭವಿಷ್ಯದ ಪಯಣಕ್ಕೆ ಶುಭ ಹಾರೈಸೋಣ. 

- ಅನಿತಾ ಬನಾರಿ 


5 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್