ಉದಯೋನ್ಮುಖರು

ಶಿರಸಿಯ ಶ್ರೀದತ್ತ ಬಂಗಾರಿಯಾದ ಕಥೆ
0

ಕಿರುತೆರೆಯ ಮೂಲಕ ಮನೆಮಾತಾರವರಲ್ಲಿ ಶ್ರೀದತ್ತ ಕೂಡ ಒಬ್ಬರು. ಝೀ ಕನ್ನಡ ವಾಹಿನಿಯ ಮಹಾದೇವಿ ಧಾರವಾಹಿಯಲ್ಲಿ ಮುಗ್ಧ ಹುಡುಗ ಬಂಗಾರಿಯಾಗಿ ವೀಕ್ಷಕರ ಮನ ಸೆಳೆದಿರುವ ಶ್ರೀದತ್ತ ತಮ್ಮ ಮೊದಲ ಧಾರಾವಾಹಿಯಲ್ಲೇ ಜನಪ್ರಿಯರಾದವರು. 

ಉತ್ತರಕನ್ನಡದ ಶಿರಸಿಯ ಶ್ರೀದತ್ತ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುತ್ತಾರೆ. ಶಾಲಾ ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಹವ್ಯಾಸಿ ತಂಡಗಳ ಜೊತೆ ಸೇರಿ ನಾಟಕಗಳನ್ನು ಮಾಡಿರುವ ಇವರು ಮುಂದೆ ರಂಗಾಯಣದಲ್ಲಿ ಒಂದು ವರುಷದ ಡಿಪ್ಲೋಮಾ ತರಬೇತಿಯನ್ನು ಪಡೆದರು. ಮುಂದೆ ಅವಕಾಶ ಅರಸಿ ಮಹಾನಗರಿಗೆ ಕಾಲಿಟ್ಟ ಶ್ರೀದತ್ತ ಮೊದಲಿಗೆ ಹಲವಾರು ರಂಗ ತಂಡಗಳಲ್ಲಿ ನಟನಾಗಿ ಮತ್ತು ತಂತ್ರಜ್ಞರಾಗಿ ಕೆಲಸ ಮಾಡಿರುತ್ತಾರೆ. ಮುಂದೆ ಏಕವ್ಯಕ್ತಿ ನಾಟಕವನ್ನು ಮಾಡಿ ಸೈ ಎನಿಸಿದ ದತ್ತರಿಗೆ ಸ್ನೇಹಿತರೊಬ್ಬರ ಮೂಲಕ ಮಹಾದೇವಿ ಧಾರಾವಾಹಿಗೆ ಆಡಿಶನ್ ನಡೆಯುತ್ತಿರುವ ವಿಚಾರ ತಿಳಿಯಿತು. ಪ್ರಯತ್ನಿಸಿ ನೋಡೋಣ ಎಂದು ಆಡಿಶನ್ ಗೆ ಹೋದರು. ಅವರ ಅದೃಷ್ಡ ಎಂಬಂತೆ ಆಯ್ಕೆಯೂ ಆದರು. 

‘’ ಬಂಗಾರಿ ತುಂಬಾ ಪೆದ್ದು. ಪೆದ್ದನಂತೆ ನಟಿಸಲು ನನಗೆ ಆರಂಭದಲ್ಲಿ ತುಂಬಾ ಕಷ್ಟ ಆಗ್ತಿತ್ತು. ಅದು ತುಂಬಾ ಸವಾಲಿನ ಪಾತ್ರ. ನಿರ್ದೇಶಕರ ಸಹಕಾರದಿಂದ ಸುಲಭವಾಯಿತು’. ಬಂಗಾರಿ ಪಾತ್ರದಿಂದ ಇಡೀ ಕರ್ನಾಟಕಕ್ಕೆ ನನ್ನ ಪರಿಚಯವಾಯಿತು’’ ಎಂದು ಸಂತೋಷದಿಂದ ತಮ್ಮ ಪಾತ್ರದ ಕುರಿತು ವಿವರಿಸುವ ಶ್ರೀದತ್ತರನ್ನು ಜನ ಇಂದು ಬಂಗಾರಿ ಎಂದೇ ಗುರುತಿಸುತ್ತಾರೆ. 

ರಂಗಭೂಮಿ ಹಿನ್ನಲೆಯಿಂದ ಬಂದ ಕಾರಣ ನನಗೆ ಯಾವ ತರಹದ ಪಾತ್ರ ಸಿಕ್ಕರೂ ನಿರಾಳವಾಗಿ ನಿರ್ವಹಿಸುತ್ತೇನೆ. ಮೊದಲ ದಿನ ಕ್ಯಾಮೆರಾ ಎದುರಿಸಿದಾಗ ಕೊಂಚ ಮಟ್ಟಿಗೆ ಭಯ ಆಗಿದ್ದೇನೂ ನಿಜ. ನಾನು ಈ ಕ್ಷೇತ್ರಕ್ಕೆ ಹೊಸಬ ಎಂಬ ಅಳುಕು ನನ್ನಲ್ಲಿತ್ತು. ಮೊದಲ ಪ್ರಯತ್ನದಲ್ಲೇ ನನ್ನ ನಟನೆ ಓಕೆ ಆಯಿತು. ತುಂಬಾ ಚೆನ್ನಾಗಿ ಅಭಿನಯಿಸುತ್ತೀಯಾ ಎಂದು ನಿರ್ದೇಶಕರು ಹೇಳಿದಾಗ ಇದ್ದ ಕೊಂಚ ಭಯ ಮಾಯವಾಯಿತು’’ ಎಂದು ಬಣ್ಣದ ಲೋಕದ ಮೊದಲ ಪಯಣವನ್ನು ವಿವರಿಸುತ್ತಾರೆ ಶ್ರೀದತ್ತ. 

‘’ನಟನೆ ಎಂದರೆ ಒಂದೆರಡು ದಿನದಲ್ಲಿ ಕಲಿತು ಮುಗಿಯುವಂತಹುದಲ್ಲ. ಒಬ್ಬ ನಟ ಜೀವನಪೂರ್ತಿ ಕಲಿಯುತ್ತಲೇ ಇರುತ್ತಾನೆ. ಪ್ರತಿದಿನ ಹೊಸತನ್ನು ಕಲಿಯುವ ಸದವಕಾಶ ಇರುತ್ತದೆ. ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಷ್ಟು ಅದು ಸಲೀಸಾಗಿ ಬಿಡುತ್ತದೆ’’  ಎನ್ನುವ ಶ್ರೀದತ್ತರಿಗೆ ಕಲಾತ್ಮಕ ಚಿತ್ರಗಳಲ್ಲಿ ನಟಿಸುವ ಬಯಕೆ. 

ರಂಗಶಿಕ್ಷಣದ ಸಂದರ್ಭದಲ್ಲಿ ಸಾಕಷ್ಟು ಮಕ್ಕಳ ಮೇಳಗಳಲ್ಲಿ ಭಾಗವಹಿಸಿರುವ ದತ್ತರಿಗೆ ಮಕ್ಕಳೊಂದಿಗೆ ಕಾಲ ಕಳೆಯುವುದೆಂದರೆ ತುಂಬಾ ಇಷ್ಟ. ಮಕ್ಕಳು ಯಾವುದೇ ಹಿಂಜರಿಕೆಯಿಲ್ಲದೆ, ದೊಡ್ಡವರಿಗಿಂತ ಚೆನ್ನಾಗಿ ಅಭಿನಯಿಸುತ್ತಾರೆ ಎನ್ನುವ ಇವರು ಸಂಘ ಸಂಸ್ಥೆಗಳು ಆಯೋಜಿಸಿರುವ ಬೇಸಿಗೆ ಶಿಬಿರಗಳಿಗೆ ನಿರ್ದೇಶಕರಾಗಿ ಹೋಗುತ್ತಾರೆ. ಎಂಟಕ್ಕೂ ಹೆಚ್ಚು ಬೇಸಿಗೆ ಶಿಬಿರಗಳನ್ನು ನಿರ್ವಹಿಸಿರುವ ಇವರು ಇಂದು ನಟನಾಗಿ ಗುರುತಿಸಿಕೊಂಡಿದ್ದಾರೆ ಎಂದರೆ ಅದಕ್ಕೆ ತಂದೆ ಶ್ರೀಧರ್ ಮತ್ತು ತಾಯಿ ಮುಕ್ತಾ ಅವರೇ ಕಾರಣ. ಅವರ ಪ್ರೋತ್ಸಾಹದಿಂದಲೇ ಇದೆಲ್ಲಾ ಸಾಧ್ಯವಾಯಿತು ಎನ್ನುವ ಶ್ರೀದತ್ತರಿಗೆ ನಟನೆಯ ಹೊರತಾಗಿ ಬೈಕ್ ರೈಡಿಂಗ್ ಎಂದರೆ ತುಂಬಾ ಇಷ್ಟ. 

- ಅನಿತಾ ಬನಾರಿ


7 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್