ಉದಯೋನ್ಮುಖರು

ವಿನಯವಂತ ಮಹಾದೇವ
0

ಸುವರ್ಣವಾಹಿನಿಯ ಹರ ಹರ ಮಹಾದೇವ ಧಾರಾವಾಹಿಯ ಮಹದೇವನಾಗಿ ವೀಕ್ಷಕರ ಮನ ಗೆದ್ದಿರುವ ಇವರ ಹೆಸರು ವಿನಯ್ ಗೌಡ. ಚಿಟ್ಟೆಹೆಜ್ಜೆ ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿವ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟ ವಿನಯ್ ಅವರು ಇಂದು ಮಹಾದೇವ ನಾಗಿಯೇ ಚಿರಪರಿಚಿತ. ಇತ್ತೀಚೆಗೆ ನಡೆದ ಸುವರ್ಣ ಪರಿವಾರ ಅವಾರ್ಡ್ಸ್ ನಲ್ಲಿ ಜನ ಮೆಚ್ಚಿದ ನಾಯಕ ಪ್ರಶಸ್ತಿ ಪಡೆದಿರುವುದು ಮಹಾದೇವ ಪಾತ್ರ ಅದೆಷ್ಟರ ಮಟ್ಟಿಗೆ ವೀಕ್ಷಕರಿಗೆ ಪ್ರಿಯವಾಗಿದೆ ಎಂಬುದನ್ನು ತಿಳಿಸುತ್ತದೆ. 

ಚಿಟ್ಟೆ ಹೆಜ್ಜೆಯ ನಂತರ ಸಿ.ಐ.ಡಿ ಕರ್ನಾಟಕದಲ್ಲಿ ಬಣ್ಣ ಹಚ್ಚಿದ ಇವರು ಮುಂದೆ ಅಂಬಾರಿ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದರು. ಶುಭ ವಿವಾಹ ಮತ್ತು ಅಮ್ಮ ಧಾರಾವಾಹಿಗಳಲ್ಲಿ ಖಳ ನಾಯಕನ ಪಾತ್ರಕ್ಕೆ ಜೀವ ತುಂಬಿರುವ ವಿನಯ್ ಅವರು “ ಕಲಾವಿದರಿಗೆ ಇಂತದ್ದೇ ಪಾತ್ರ ಬೇಕು ಅಂತೇನಿಲ್ಲ. ಆತನಿಗೆ ಎಲ್ಲಾ ಪಾತ್ರವೂ ಮುಖ್ಯವೇ. ಸಿಕ್ಕ ಪಾತ್ರವನ್ನು ಸರಿಯಾಗಿ ನಿಭಾಯಿಸುವುದು ಹೇಗೆ ಎಂದು ತಿಳಿದಿರಬೇಕು. ನಾನು ಅಷ್ಟೇ. ನನಗೆ ಸಿಕ್ಕ ಪಾತ್ರವನ್ನು ಜವಾಬ್ದಾರಿಯಿಂದ ನಿಭಾಯಿಸುತ್ತಿದ್ದೇನೆ’’ ಎನ್ನುತ್ತಾರೆ. 

ಪೌರಾಣಿಕ ಪಾತ್ರದಲ್ಲಿ ಅಭಿನಯಿಸುವುದೆಂದರೆ ನಿಜಕ್ಕೂ ಕಷ್ಟ. ಅದರಲ್ಲೂ ಶಿವ ಆಗಿ ನಟಿಸುವುದು ಸುಲಭವಲ್ಲ. ಶಿವನ ಹಾಗೆ ನಡೆದುಕೊಳ್ಳುವುದು ಎಲ್ಲರಿಗೂ ಸಾಧ್ಯವಾಗದು. ಅದು ನಟನೆಯೇ ಆದರೂ ಜೀವಂತಿಕೆಯಿದ್ದರೆ ಮಾತ್ರ ಪಾತ್ರಕ್ಕೊಂದು ತೂಕ ಬರುತ್ತದೆ. ಶಿವ ಭಕ್ತರಾಗಿರುವ ವಿನಯ್ ಗೌಡ ಅವರು ಶಿವನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎಂದರೆ ತಪ್ಪಾಗಲಾರದು. 

‘’ಶಿವ ನನ್ನ ಇಷ್ಟದ ದೇವರು. ಮಹಾದೇವನಾಗಿ ನಟಿಸುತ್ತಿರುವುದು ನನಗೆ ಹೆಮ್ಮೆ ಎನಿಸುತ್ತಿದೆ’’ ಎನ್ನುವ ವಿನಯ್ ಅವರ ವ್ಯಕ್ತಿತ್ವದಲ್ಲಿ ಇಂದು ಬದಲಾವಣೆ ಆಗಿದೆ ಎಂದರೆ ಕಾರಣ ಮಹಾದೇವ  ನ ಪಾತ್ರ. ಮಹಾದೇವನ ಪಾತ್ರದಿಂದಾಗಿ ಅವರಲ್ಲಿನ ತಾಳ್ಮೆ ಜಾಸ್ತಿ ಆಗಿದೆ. ಪ್ರತಿ ದಿನ ಧ್ಯಾನ ಮಾಡುವ ಇವರು ಮಾಂಸಾಹಾರವನ್ನೇ ತ್ಯಜಿಸಿದ್ದಾರೆ. ಮಾತ್ರವಲ್ಲ ಪಾರ್ಟಿಗೆ ಹೋಗುವುದಿಲ್ಲ, ಸಿಗರೇಟ್ ಸೇದುವುದನ್ನು ಬಿಟ್ಟಿದ್ದಾರೆ. ‘’ಮೊದಲೆಲ್ಲಾ ಬೇರೆಯವರು ಮಾತನಾಡುವಾಗ ನಾನು ಅರ್ಧಕ್ಕೆ ನಿಲ್ಲಿಸಿ ಮಾತಾನಾಡುತ್ತಿದ್ದೆ, ಆದರೆ ಇದೀಗ ಅವರಾಡಿದ ಮಾತನ್ನು ಅರ್ಥಮಾಡಿಕೊಂಡು ಮಾತನಾಡುತ್ತೇನೆ. ಅಷ್ಟರ ಮಟ್ಟಿಗೆ ಮಹಾದೇವ ಪಾತ್ರ ನನ್ನನ್ನು ಬದಲಾಯಿಸಿದೆ’’ ಎಂದು ಸಂತೋಷದಿಂದ ಹೇಳುತ್ತಾರೆ ವಿನಯ್ ಗೌಡ. 

ಪ್ರತಿಭೆ ಇದ್ದರೆ ಸಾಕು, ನಟನಾ ಕ್ಷೇತ್ರದಲ್ಲಿ ಮಿಂಚಬಹುದು. ಸ್ವಂತ ಪ್ರಯತ್ನ ತುಂಬಾ ಮುಖ್ಯ. ನಾನಿಂದು ಜನರ ಮೆಚ್ಚುಗೆಗೆ ಪಾತ್ರವಾಗಿದ್ದೇನೆ ಎಂದರೆ ಅದಕ್ಕೆ ಪ್ರಯತ್ನವೇ ಕಾರಣ ಎನ್ನುವ ವಿನಯ್ ಅವರಿಗೆ ಮಹಾದೇವ ಪಾತ್ರ ನೀಡಿರುವ ತೃಪ್ತಿ ಬೇರೆ ಯಾವ ಪಾತ್ರವೂ ನೀಡಿರಲಿಲ್ಲವಂತೆ. ಅವರು ಒಂದು ಕಾರ್ಯಕ್ರಮಕ್ಕೆ ಹೋದಾಗ ನಡೆದ ಘಟನೆ. ನಡೆಯಲು ಕಷ್ಟ ಪಡುತ್ತಿದ್ದ ಮಹಿಳೆಯೊಬ್ಬರು ಇವರ ಬಳಿ ಬಂದು ‘’ ನಾನು ಶಿವ ಎಂದರೆ ಲಿಂಗ ಎಂದುಕೊಂಡಿದ್ದೆ. ಆದರೆ ಧಾರಾವಾಹಿಯಲ್ಲಿ ನಿನ್ನನ್ನು ನೋಡಿದ ಬಳಿಕ ನಿನಗೆ ಕೈ ಮುಗಿಯಬೇಕು ಎಂದೆನಿಸಿತು’’ ಎಂದರಂತೆ. ಅಷ್ಟರ ಮಟ್ಟಿಗೆ ಮಹಾದೇವ ಪಾತ್ರ ಜನರ ಮೇಲೆ ಪ್ರಭಾವ ಬೀರಿದೆ. ಒಬ್ಬ ಕಲಾವಿದನಿಗೆ ಇದಕ್ಕಿಂತ ಬೇರೆ ಬಿರುದೇನು ಬೇಕು? 

ಸುವರ್ಣ ವಾಹಿನಿಯ ಸೂಪರ್ ಜೋಡಿ ರಿಯಾಲಿಟಿ ಶೋ ವಿನ ವಿನ್ನರ್ ಆಗಿರುವ ವಿನಯ್ ಗೌಡ ಬೆಳ್ಳಿತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. ನೀನಾಸಂ ಸತೀಶ್ ಅಭಿನಯದ ರಾಕೆಟ್ ಚಿತ್ರದಲ್ಲಿ ಎರಡನೇ ನಾಯಕನಾಗಿ ನಟಿಸಿದ್ದರು. ಖಳ ನಾಯಕನಾಗಿ ಅಭಿನಯಿಸಿರುವ ಅವನಲ್ಲಿ ಇವಳಿಲ್ಲಿ ಮತ್ತು ಮೂಟೆ ಚಿತ್ರ ಬಿಡುಗಡೆಯಾಗಬೇಕಿದೆ. 

ನಟನೆ ಎನ್ನುವುದು ಒಂದು ದಿನದಲ್ಲಿ ಕಲಿತು ಮುಗಿಯುವಂತದ್ದಲ್ಲ. ಕಲಾವಿದನಿಗೆ ಪ್ರತಿದಿನವೂ ಕಲಿಯುವುದಿರುತ್ತದೆ ಎನ್ನುವ ವಿನಯ್ ಗೌಡ ಅವರ ಬಣ್ಣದ ಲೋಕ ಕಲರ್ ಫುಲ್ ಆಗಿ ಸಾಗಲಿ 

- ಅನಿತಾ ಬನಾರಿ


8 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್